ನವದೆಹಲಿ: ಅಪ್ಲಿಕೇಶನ್ ನಲ್ಲಿರುವ ದೋಷವೊಂದನ್ನು ಪತ್ತೆ ಹಚ್ಚಿದ್ದಕ್ಕೆ ಚೆನ್ನೈ ಮೂಲದ ಯುವಕನಿಗೆ ಫೇಸ್‍ಬುಕ್ ಮಾಲೀಕತ್ವದ ಇನ್‍ಸ್ಟಾಗ್ರಾಮ್ 20 ಲಕ್ಷ ರೂ. ಹಣವನ್ನು ಬಹುಮಾನವಾಗಿ ನೀಡಿದೆ.
ಖಾತೆಯೊಂದನ್ನು ವ್ಯಕ್ತಿಯ ಅರಿವಿಗೆ ಬಾರದಂತೆಯೇ ಹ್ಯಾಕ್ ಮಾಡುವ ಲೋಪವನ್ನು ಚೆನ್ನೈ ಮೂಲದ ಭದ್ರತಾ ಸಂಶೋಧಕ ಲಕ್ಷ್ಮಣ್ ಮುತ್ತಯ್ಯ ಪತ್ತೆ ಹಚ್ಚಿ ಈ ಮೇಲ್ ಮಾಡಿದ್ದರು. ಆರಂಭದಲ್ಲಿ ಇಮೇಲ್ ಮಾಡಿದ್ದಕ್ಕೆ ಇನ್‍ಸ್ಟಾಗ್ರಾಮ್‍ನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ ವಿಡಿಯೋ ದಾಖಲೆ, ಸ್ಕ್ರೀನ್ ಶಾಟ್‍ಗಳನ್ನು ಕಳುಹಿಸಿ ಭದ್ರತಾ ಲೋಪ ಇರುವುದನ್ನು ಮನವರಿಕೆ ಮಾಡಿದ್ದರು.
Advertisement
Advertisement
ದೋಷವನ್ನು ಸರಿಪಡಿಸಿಕೊಂಡ ಇನ್‍ಸ್ಟಾಗ್ರಾಂ, ಬಗ್ ಬೌಂಟಿ ಯೋಜನೆಯಡಿ ಮುತ್ತಯ್ಯಗೆ 30 ಸಾವಿರ ಅಮೆರಿಕನ್ ಡಾಲರ್ ಮೊತ್ತದ ಬಹುಮಾನ ನೀಡಿದೆ.
Advertisement
ಈ ಸಂಬಂಧ ಮುತ್ತಯ್ಯ ಅವರು, ಯಾರೊಬ್ಬರ ಖಾತೆಯನ್ನು ಹ್ಯಾಕ್ ಮಾಡಲು ಸಾಧ್ಯವಾಗುವ ಒಂದು ದೋಷವನ್ನು ನಾನು ಇನ್‍ಸ್ಟಾಗ್ರಾಮ್‍ಗೆ ತಿಳಿಸಿದೆ. ಆರಂಭದಲ್ಲಿ ನಾನು ಮೇಲ್ ಮಾಡಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ನಂತರ ಕೆಲ ಇಮೇಲ್ ಮತ್ತು ಸ್ಕ್ರೀನ್ ಶಾಟ್ ವಿಡಿಯೋವನ್ನು ಕಳುಹಿಸಿದೆ. ಇದಾದ ಬಳಿಕ ಅವರಿಗೆ ಮನವರಿಕೆ ಆಗಿದ್ದು ದೋಷವನ್ನು ಸರಿಪಡಿಸಿದೆ ಎಂದು ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ. ದೋಷವನ್ನು ಪತ್ತೆ ಹಚ್ಚಿದ್ದಕ್ಕೆ ಫೇಸ್‍ಬುಕ್ ಕಂಪನಿ ಧನ್ಯವಾದ ತಿಳಿಸಿ 30 ಸಾವಿರ ಡಾಲರ್ ಬಹುಮಾನವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದೆ.
Advertisement
ಮುತ್ತಯ್ಯ ಅವರು ಈ ರೀತಿ ದೋಷವನ್ನು ಕಂಡು ಹಿಡಿಯುವುದು ಇದೇ ಮೊದಲಲ್ಲ. ಈ ಹಿಂದೆಯೂ ಫೇಸ್‍ಬುಕ್‍ನಲ್ಲಿ ದೋಷವನ್ನು ಕಂಡು ಹಿಡಿದು ನಗದು 8 ಲಕ್ಷ ರೂ. ನಗದು ಬಹುಮಾನವನ್ನು ಪಡೆದಿದ್ದರು.
ಐಟಿ ದಿಗ್ಗಜ ಕಂಪನಿಗಳಾದ ಫೇಸ್‍ಬುಕ್, ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಕಂಪನಿಗಳು ಗ್ರಾಹಕರ ಖಾತೆಗೆ ಗರಿಷ್ಟ ಭದ್ರತೆ ನೀಡಲು ಉತ್ಪನ್ನದಲ್ಲಿರುವ ದೋಷವನ್ನು ಪತ್ತೆ ಹಚ್ಚಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತದೆ. ದೋಷವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸದೇ ಕಂಪನಿಗೆ ತಿಳಿಸಿದರೆ ಮಾತ್ರ ಈ ಬಹುಮಾನ ಸಿಗುತ್ತದೆ.