– ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ; ಪೂಜೆಗೆ ಬೆಟ್ಟಕ್ಕೆ ಬಂದಿದ್ದ ನವಜೋಡಿ
ಚೆನ್ನೈ: ಹಣ್ಣಿಗಾಗಿ ಮುತ್ತಿಗೆ ಹಾಕಿದ ಕೋತಿಗಳಿಗೆ ಹೆದರಿ ನವವಿವಾಹಿತ ಮಹಿಳೆಯೊಬ್ಬರು ಬೆಟ್ಟದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ (Tamil Nadu) ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ.
ತೂತುಕುಡಿಯ ದಕ್ಷಿಣ ತಿಟ್ಟಂಕುಳಂ ಪ್ರದೇಶದ ಅನಿತಾ ಮೃತ ದುರ್ದೈವಿ. ಕಳೆದ ತಿಂಗಳಷ್ಟೇ 29 ವರ್ಷದ ಸುರೇಶ್ ಅವರನ್ನು ವಿವಾಹವಾಗಿದ್ದರು. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಸುರೇಶ್ ಇತ್ತೀಚೆಗೆ ಮನೆಗೆ ಮರಳಿದ್ದರು. ದಂಪತಿ ಪೂಜೆ ಸಲ್ಲಿಸಲು ಕಜುಗುಮಲೈನಲ್ಲಿರುವ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದನ್ನೂ ಓದಿ: ಇಷ್ಟ ಇಲ್ಲ ಎಂದಿದ್ದರೆ ಮದುವೆಯನ್ನೇ ನಿಲ್ಲಿಸುತ್ತಿದ್ದೆವು: ಪೊಲೀಸರೆದುರು ಸಿಯಾ ಸಹೋದರನ ಮಾತು
ಮುಖ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ, ದಂಪತಿ ಬೆಟ್ಟದ ತುದಿಯಲ್ಲಿರುವ ಉಚಿಪಿಳ್ಳಯಾರ್ ದೇವಾಲಯಕ್ಕೆ ಹತ್ತಿದರು. ದಂಪತಿ, ಕೋತಿಗಳಿಗೆ ಹಣ್ಣುಗಳನ್ನು ನೀಡಲು ಮುಂದಾದರು. ಈ ವೇಳೆ, ಹಲವು ಕೋತಿಗಳು ಇದ್ದಕ್ಕಿದ್ದಂತೆ ಅವರನ್ನು ಸುತ್ತುವರಿದಿವೆ. ಕೋತಿಗಳಿಗೆ ಹೆದರಿ ಮಹಿಳೆ ಬೆಟ್ಟದ ತುದಿಯಿಂದ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಕಜುಗುಮಲೈನ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ, ಪೊಲೀಸರೊಂದಿಗೆ ಸೇರಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್ ವಾಹನ ಡಿಕ್ಕಿ – ಮಂತ್ರಾಲಯಕ್ಕೆ ತೆರಳುತ್ತಿದ್ದ ಐವರು ದುರ್ಮರಣ
