ಚೆನ್ನೈ: ಸಿಎಂ ವಿಜಯ್ (Vijay) ಸಂಪುಟ ವಿಸ್ತರಣೆ ಹಿನ್ನೆಲೆ ಕಾಂಗ್ರೆಸ್ ಶಾಸಕ ಎಸ್. ರಾಜೇಶ್ ಕುಮಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಹುಲ್ ಗಾಂಧಿ (Rahul Gandhi) ಹೆಸರನ್ನು ಪ್ರಸ್ತಾಪಿಸಿದರು. ಇದಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚೆನ್ನೈನಲ್ಲಿ ನಡೆದ ಸಂಪುಟ ವಿಸ್ತರಣೆಯಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಿದರು. ಕಿಲ್ಲಿಯೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ರಾಜೇಶ್ ಕುಮಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಅವರು ಕಾಂಗ್ರೆಸ್ ನಾಯಕರ ಹೆಸರನ್ನು ಪ್ರಮಾಣವಚನದ ಕೊನೆಯಲ್ಲಿ ಪ್ರಸ್ತಾಪಿಸಿರುವುದು ವಿವಾದಕ್ಕೆ ಕಾರಣವಾಯಿತು. ಇದನ್ನೂ ಓದಿ: ವಿಜಯ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ – 23 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ರಾಜೇಶ್ ಕುಮಾರ್ ಅಧಿಕೃತ ಪ್ರಮಾಣ ವಚನ ಪಠ್ಯವನ್ನು ಓದಿ ಮುಗಿಸಿದ ಬಳಿಕ, ಕಾಮರಾಜ್ ಹೆಸರು ಚಿರಾಯು ಆಗಲಿ, ಭಾರತ ರತ್ನ ರಾಜೀವ್ ಗಾಂಧಿ ಚಿರಾಯು ಆಗಲಿ ಹಾಗೂ ಜನನಾಯಕ ರಾಹುಲ್ ಗಾಂಧಿ ಚಿರಾಯು ಆಗಲಿ ಎಂದು ಹೇಳಿದರು.

ಈ ವೇಳೆ ರಾಜ್ಯಪಾಲ ಅರ್ಲೇಕರ್ ಮತನಾಡಿ, ಅದು ಪ್ರಮಾಣವಚನದ ಭಾಗವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ರಾಜೇಶ್ ಕುಮಾರ್ ಪ್ರಮಾಣ ವಚನದ ದಾಖಲೆಗಳಿಗೆ ಸಹಿ ಹಾಕಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಐದು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಡಿಎಂಕೆ ಜೊತೆಗಿನ ಮೈತ್ರಿಯನ್ನು ಮುರಿದು, ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿತ್ತು. ಇದನ್ನೂ ಓದಿ: ಇಟಲಿ ಪ್ರಧಾನಿ ಮೆಲೋನಿಗೆ ‘ಶಿರುಯಿ ಲಿಲಿ, ಮುಗಾ’ ರೇಷ್ಮೆ ವಸ್ತ್ರ ಗಿಫ್ಟ್ ಕೊಟ್ಟ ಮೋದಿ – ಏನಿದರ ವಿಶೇಷತೆ?
ಸುಮಾರು ಆರು ದಶಕಗಳ ಬಳಿಕ ಕಾಂಗ್ರೆಸ್ ಪಕ್ಷ ತಮಿಳುನಾಡು ಸರ್ಕಾರದ ಭಾಗವಾಗಿರುವುದು ವಿಶೇಷವಾಗಿದೆ. 1967ರಲ್ಲಿ ಎಂ. ಭಕ್ತವತ್ಸಲಂ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭಾಗವಾಗಿರಲಿಲ್ಲ. ಇಂದು ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ 21 ಟಿವಿಕೆ ಶಾಸಕರು ಹಾಗೂ ಇಬ್ಬರು ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

