ಚೆನ್ನೈ: ಅಲ್ಪಸಂಖ್ಯಾತರ ವಿಭಾಗದ ಮುಖ್ಯಸ್ಥರಾಗಿರುವ ಮಹಿಳಾ ನಾಯಕಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಕೆಯೊಡ್ಡಿದ್ದ ಆರೋಪದಡಿ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದ ನಾಯಕ ಸೂರ್ಯ ಶಿವ (Suriya Siva) ಅವರನ್ನು 6 ತಿಂಗಳ ಕಾಲ ತಮಿಳುನಾಡು (Tamil Nadu) ಬಿಜೆಪಿ (BJP) ಅಮಾನತುಗೊಳಿಸಿದೆ.
ಸದ್ಯ ವೈರಲ್ ಆಗುತ್ತಿರುವ ಫೋನ್ ಸಂಭಾಷಣೆಯ ಆಡಿಯೋದಲ್ಲಿ ಡೈಸಿ ಸರನ್ ಅನ್ನು ಕಿಡ್ನ್ಯಾಪ್ ಮಾಡಲು ಗೂಂಡಾಗಳನ್ನು ಕಳುಹಿಸುತ್ತೇನೆ ಮತ್ತು ಆಕೆಯನ್ನು ಕತ್ತರಿಸಿ ಹಾಕುತ್ತೇನೆ ಎನ್ನುವುದರ ಜೊತೆಗೆ ಅಶ್ಲೀಲ ಲೈಂಗಿಕ ಟೀಕೆಗಳನ್ನು ಸೂರ್ಯ ಶಿವ ಮಾಡಿದ್ದಾರೆ. ಇದನ್ನೂ ಓದಿ: ಮತ್ತೊಂದು ಉಗ್ರ ಸಂಘಟನೆಯ ಸ್ಥಾಪನೆಗೆ ವೇದಿಕೆಯಾಯ್ತಾ ಕರ್ನಾಟಕ?
ಗುರುವಾರ ಇಬ್ಬರೂ ನಾಯಕರು ಶಿಸ್ತು ಸಮಿತಿಯ ಮುಂದೆ ಹಾಜರಾಗಿದ್ದರು. ಈ ವೇಳೆ ಇತರ ಪಕ್ಷದವರಂತೆ ಈ ವಿಚಾರವನ್ನು ಇಲ್ಲಿಯೇ ಬಿಡಲು ಸಾಧ್ಯವಿಲ್ಲ. ಸೂರ್ಯ ಶಿವ ಅವರನ್ನು ಆರು ತಿಂಗಳ ಕಾಲ ಪಕ್ಷದ ಎಲ್ಲಾ ಸ್ಥಾನಗಳಿಂದ ಅಮಾನತುಗೊಳಿಸಲಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯಸ್ಥರು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ (K Annamalai) ಅವರು, ಸೂರ್ಯ ಶಿವ ಅವರು ಪಕ್ಷದ ಸ್ವಯಂಸೇವಕರಾಗಿ ಕೆಲಸ ಮಾಡಬಹುದು. ಅವರ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದರೆ ಮತ್ತು ಪಕ್ಷದಲ್ಲಿ ಅವರ ಬಗ್ಗೆ ವಿಶ್ವಾಸ ಮೂಡಿದರೆ, ಅವರ ಹುದ್ದೆಗೆ ಮರಳುತ್ತಾರೆ. ಬಿಜೆಪಿಯವರು ಮಹಿಳೆಯರನ್ನು ದೇವರಂತೆ ಪೂಜಿಸುತ್ತಾರೆ. ನಾವು ಈ ವಿಚಾರವನ್ನು ಕಡೆಗಣಿಸಿಲ್ಲ ಮತ್ತು ನಟಿಸುತ್ತಿಲ್ಲ ಎಂದಿದ್ದಾರೆ.
ಡಿಎಂಕೆಯ ಹಿರಿಯ ನಾಯಕ ಮತ್ತು ಪಕ್ಷದ ರಾಜ್ಯಸಭಾ ಸಂಸದ ತಿರುಚಿ ಶಿವ ಅವರ ಪುತ್ರ ಸೂರ್ಯ ಶಿವ ಈ ವರ್ಷದ ಮೇ ತಿಂಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: 13 ವರ್ಷದ ನಾಯಿ ನಾಪತ್ತೆ – ಹುಡುಕಿ ಕೊಟ್ಟವರಿಗೆ 25 ಸಾವಿರ ರೂ. ಬಂಪರ್ ಬಹುಮಾನ