ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು (Suvendu Adhikari) ಭವಾನಿಪುರ (Bhabanipur) ವಿಧಾನಸಭಾ ಸ್ಥಾನವನ್ನು ಉಳಿಸಿಕೊಂಡು ನಂದಿಗ್ರಾಮ (Nandigram) ಕ್ಷೇತ್ರಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭವಾನಿಪುರ ಮತ್ತು ನಂದಿಗ್ರಾಮ, ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದಿದ್ದರು. ಟಿಎಂಸಿ ಭದ್ರಕೋಟೆಯಾದ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಅವರು 15,105 ಮತಗಳ ಅಂತರದಿಂದ ಸೋತಿದ್ದರು. ನಂದಿಗ್ರಾಮದಲ್ಲಿ ಟಿಎಂಸಿಯ ಪವಿತ್ರ ಕರ್ ವಿರುದ್ಧ ಗೆದ್ದು ತಮ್ಮ ಕ್ಷೇತ್ರವನ್ನು ಅಧಿಕಾರಿ ರಕ್ಷಿಸಿಕೊಂಡಿದ್ದರು. ಇದನ್ನೂ ಓದಿ: ಬಂಗಾಳದಲ್ಲಿ ಸುವೇಂದು ʻಅಧಿಕಾರʼ – ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ
ಉಪಚುನಾವಣೆಯಲ್ಲಿ ನಂದಿಗ್ರಾಮದಿಂದ ಬೇರೆಯವರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಆದರೆ ಅಲ್ಲಿನ ಜನರ ಜೊತೆ ನಾನು ಇರುತ್ತೇನೆ. ನಂದಿಗ್ರಾಮದ ಜನರಿಗೆ ನಾನು ನೀಡಿದ ಎಲ್ಲಾ ಅಭಿವೃದ್ಧಿಯ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಇಂದು ಮೊದಲ ದಿನ ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಬಂದ ಅಧಿಕಾರಿ, ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಸದನದ ಪ್ರವೇಶದ್ವಾರದಲ್ಲಿ ಮಂಡಿಯೂರಿ ನಮಸ್ಕರಿಸಿ, ಒಳಗೆ ಪ್ರವೇಶಿಸಿದರು.
ಮೇ 9 ರಂದು ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸುವೇಂದು ಅಧಿಕಾರಿ ಪ್ರಮಾಣ ಸ್ವೀಕರಿಸಿದ್ದರು. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಹಾಗೂ ಎನ್‌ಡಿಎ ಆಡಳಿತದ 20 ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಿದ್ದರು.
ಬಂಗಾಳ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನ ಗಳಿಸಿ ಅಧಿಕಾರದ ಗದ್ದುಗೆ ಹಿಡಿದಿದೆ. ಇನ್ನೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) 80 ಸ್ಥಾನಗಳನ್ನು ಗೆದ್ದಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದಕ್ಕೆ ನನ್ನ ಪಿಎ ಹತ್ಯೆ: ಸುವೇಂದು ಅಧಿಕಾರಿ

