ಜೋಹಾನ್ಸ್‌ಬರ್ಗ್: ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧ ಸ್ಫೋಟಕ ಶತಕ ಸಿಡಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.
ಟಿ20 ಕ್ರಿಕೆಟ್ ವೃತ್ತಿಜೀವನದ 4ನೇ ಹಾಗೂ ವೇಗದ ಶತಕ ಸಿಡಿಸಿದ ಸೂರ್ಯ, ಈ ಸಾಧನೆ ಮಾಡಿದ ರೋಹಿತ್ ಶರ್ಮಾ ಹಾಗೂ ಆಸೀಸ್‌ನ ಗ್ಲೇನ್ ಮ್ಯಾಕ್ಸ್‌ವೆಲ್ ದಾಖಲೆಯನ್ನ ಸರಿಗಟ್ಟಿದ್ದಾರೆ. ರೋಹಿತ್ ಶರ್ಮಾ 148 ಪಂದ್ಯಗಳು 140 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಹಾಗೆಯೇ ಗ್ಲೇನ್ ಮ್ಯಾಕ್ಸ್‌ವೆಲ್ 100 ಪಂದ್ಯ, 92 ಇನ್ನಿಂಗ್ಸ್‌ನಲ್ಲಿ 4ನೇ ಶತಕ ಸಿಡಿಸಿದ್ದರು. ಆದ್ರೆ ಸೂರ್ಯಕುಮಾರ್ ಕೇವಲ 61 ಪಂದ್ಯ 57 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.
Advertisement
Advertisement
ಗುರುವಾರ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ 178.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯ ಮೊದಲ 25 ಎಸೆತಗಳಲ್ಲಿ 27 ರನ್ ಗಳಿಸಿದ್ರೆ, ಮುಂದಿನ 31 ಎಸೆತಗಳಲ್ಲಿ 73 ರನ್ ಚಚ್ಚಿ ಶತಕ ಪೂರೈಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4ನೇ ಶತಕ ದಾಖಲಿಸಿದರು. ಇದರಲ್ಲಿ 7 ಬೌಂಡರಿ, 8 ಸಿಕ್ಸರ್‌ಗಳೂ ಸೇರ್ಪಡೆಯಾದವು.
Advertisement
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಸೂರ್ಯಕುಮಾರ್ ಶತಕದ ನೆರವಿನಿಂದ 201 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
Advertisement
ಭಾರತದ ಪರ ನಾಯಕ ಸೂರ್ಯಕುಮಾರ್ ಯಾದವ್ 56 ಎಸೆತಗಳಲ್ಲಿ 100 ರನ್ (7 ಬೌಂಡರಿ, 8 ಸಿಕ್ಸರ್) ಚಚ್ಚಿದರೆ, ಯುವ ಆರಂಭಿಕ ಯಶಸ್ವಿ ಜೈಸ್ವಾಲ್ 41 ಎಸೆತಗಳಲ್ಲಿ 60 ರನ್ (6 ಬೌಂಡರಿ, 3 ಸಿಕ್ಸರ್) ಬಾರಿಸಿದರು. ಶುಭಮನ್ ಗಿಲ್ 8 ರನ್, ರಿಂಕು ಸಿಂಗ್ 14 ರನ್, ಜಿತೇಶ್ ಶರ್ಮಾ, ರವೀಂದ್ರ ಜಡೇಜಾ ತಲಾ 4 ರನ್, ಮೊಹಮ್ಮದ್ ಸಿರಾಜ್ 2 ರನ್ ಗಳಿಸಿದ್ರೆ ತಿಲಕ್ ವರ್ಮಾ ಶೂನ್ಯ ಸುತ್ತಿದರು.