ನವದಹೆಲಿ: 500 ಮತ್ತು 1000 ರೂ. ಮುಖಬೆಲೆ ನೋಟುಗಳನ್ನು ಅಮಾನ್ಯೀಕರಣ (Demonetisation) ಮಾಡಿದ್ದ ಕೇಂದ್ರ ಸರ್ಕಾರದ (Central Government) ನಿರ್ಧಾರವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ. ನೋಟು ಅಮಾನ್ಯೀಕರಣ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಸೋಮವಾರ ವಜಾಗೊಳಿಸಿದೆ.
ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠವು ತೀರ್ಪು ಪ್ರಕಟಿಸಿದೆ. ಕೇಂದ್ರದ ನೋಟ್ ಬ್ಯಾನ್ ನಿರ್ಧಾರಕ್ಕೆ ಪೀಠ 4:1 ಅನುಪಾತದಲ್ಲಿ ತೀರ್ಪು ಪ್ರಕಟಿಸಿದೆ. ನೋಟು ಅಮಾನ್ಯೀಕರಣ ಮಾಡಿರುವ ಕೇಂದ್ರದ ನಿರ್ಧಾರ ಸಮ್ಮತವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನೂ ಓದಿ: ರಾಜೌರಿಯಲ್ಲಿ ಗುಂಡಿನ ದಾಳಿ ನಡೆದ ಮನೆ ಬಳಿ ಮತ್ತೊಂದು ಸ್ಫೋಟ – ಮಗು ಸಾವು
2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ನೋಟು ಬ್ಯಾನ್ ಮಾಡಿದ್ದು ಮಾನ್ಯವಾಗಿದೆ. ಕೇಂದ್ರವು ಅದನ್ನು ಪ್ರಾರಂಭಿಸಿದೆ ಎಂಬ ಕಾರಣಕ್ಕೆ ನಿರ್ಧಾರವನ್ನು ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಆರ್‌ಬಿಐನ ಕೇಂದ್ರೀಯ ಮಂಡಳಿಯೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರವು ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಈ ಸಂಬಂಧ ಆರು ತಿಂಗಳ ಕಾಲ ಇಬ್ಬರ ನಡುವೆ ಸಮಾಲೋಚನೆ ನಡೆದಿದೆ ಎಂದು ಐವರು ಸದಸ್ಯರ ಪೀಠದಲ್ಲಿ ನಾಲ್ವರು ನ್ಯಾಯಾಧೀಶರು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ – ಕೋಪದ ಭರದಲ್ಲಿ ತನ್ನ ನವಜಾತ ಶಿಶುವನ್ನು ನೆಲಕ್ಕೆ ಎಸೆದ
ಆದರೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು, ನೋಟು ರದ್ದತಿಯನ್ನು ಸಂಸತ್ತಿನ ಕಾಯಿದೆಯ ಮೂಲಕ ಕಾರ್ಯಗತಗೊಳಿಸಬಹುದಿತ್ತು. ಅದು ಸರ್ಕಾರದಿಂದ ಅಲ್ಲ ಎಂದು ಕೇಂದ್ರದ ನಿರ್ಧಾರಕ್ಕೆ ಭಿನ್ನ ತೀರ್ಪು ಪ್ರಕಟಿಸಿದ್ದಾರೆ.
ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್, ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು 2022ರ ಡಿಸೆಂಬರ್ 7ರಂದು ತೀರ್ಪನ್ನು ಕಾಯ್ದಿರಿಸಿತ್ತು.