ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದ್ದರು ಕಿಚ್ಚ ಸುದೀಪ್. ಜೂನ್ 1ನೇ ತಾರೀಖಿನಂದು ಹೊಸ ಸಿನಿಮಾದ ಅಪ್ ಡೇಟ್ ನೀಡುವುದಾಗಿ ತಿಳಿಸಿದ್ದರು. ಹೊಸ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಅದಕ್ಕೂ ಆರು ದಿನ ಮುಂಚೆಯೇ ಇಂದು ಆ ಸಿನಿಮಾದ ಸಣ್ಣ ಸುಳಿವು ಕೊಟ್ಟಿದ್ದಾರೆ. ಆ ಸಿನಿಮಾದ ನಿರ್ಮಾಪಕರು ಯಾರು ಎಂದು ಸಣ್ಣದೊಂದು ಝಲಕ್ ರಿಲೀಸ್ ಮಾಡುವ ಮೂಲಕ ತಿಳಿಸಿದ್ದಾರೆ.
ಸುದೀಪ್ ಅವರ ಮುಂದಿನ ಸಿನಿಮಾವನ್ನು ತಮಿಳು (Tamil) ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡುತ್ತಿದ್ದು, ಸುದೀಪ್ ಟೀಸರ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಣ್ಣದೊಂದು ವಿಡಿಯೋ ರಿಲೀಸ್ ಮಾಡಿದೆ ತಮಿಳಿನ ಕಲೈಪುಲಿ ಎಸ್ ತನು (Kalaipuli S Tanu) ನಿರ್ಮಾಣ ಸಂಸ್ಥೆ. ಕಿಚ್ಚ ಕಾರಿನಿಂದ ಇಳಿಯುವುದರ ಜೊತೆಗೆ ಮೇಕಪ್ ನಲ್ಲಿ ಭಾಗಿಯಾಗುವ ಸಣ್ಣದೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸುದೀಪ್ ಅವರ ಗೆಟಪ್ ಜಭರದಸ್ತಾಗಿ ಇರಲಿದೆ ಎನ್ನುವ ಸುಳಿವನ್ನೂ ನೀಡಿದ್ದಾರೆ.
ಈ ಹಿಂದೆಯಷ್ಟೇ ತಾವು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕುರಿತು ಕಿಚ್ಚ ಸುದೀಪ್ (Sudeep) ಬಹಿರಂಗ ಪಡಿಸಿದ್ದರು. ಮೂರು ಸಿನಿಮಾಗಳಲ್ಲಿ ಮೊದಲು ಯಾವುದು ಶುರುವಾಗಲಿದೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಅದಕ್ಕೂ ಒಂದಷ್ಟು ಮಾಹಿತಿ ಸಿಕ್ಕಿದೆ. ಕೈಯಲ್ಲಿರುವ ಮೂರು ಸಿನಿಮಾಗಳಲ್ಲಿ ಮೊದಲ ಶುರುವಾಗುವ ಚಿತ್ರದ ಬಗ್ಗೆ ಅವರು ಆಪ್ತರು ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹೃದಯಾಘಾತದಿಂದ ಫೇಮಸ್ ನಟ ನಿತೇಶ್ ಪಾಂಡೆ ನಿಧನ
ಮೂರರಲ್ಲಿ ಮೊದಲ ಶುರುವಾಗುವ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಅವರ ಅಭಿಮಾನಿಗಳದ್ದು. ಪಬ್ಲಿಕ್ ಟಿವಿ ಡಿಜಿಟಲ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮೊದಲು ಸಿನಿಮಾವಾಗಿ ‘ಬಿಲ್ಲ ರಂಗ ಬಾಷಾ’ (Billa Ranga Basha) ಮೂಡಿ ಬರಲಿದೆ. ಈ ಸಿನಿಮಾದ ಟೀಸರ್ ಮೇ 22ರಿಂದ ಶೂಟಿಂಗ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದು, ವಿಕ್ರಾಂತ್ ರೋಣದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ.
ನಂತರದ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ತಮಿಳು ನಿರ್ದೇಶಕ ಚರಣ್ (Charan) ಕನ್ನಡಕ್ಕೆ ಬರುತ್ತಿರುವುದಾಗಿ ಸುದ್ದಿ ಆಗಿದೆ. ವಿಕ್ರಾಂತ್ ರೋಣ ಚಿತ್ರದ ನಂತರ ಕಿಚ್ಚನಿಗಾಗಿ ಸಿನಿಮಾ ಮಾಡುತ್ತಿರುವುದಾಗಿ ಅನೂಪ್ ಭಂಡಾರಿ (Anoop Bhandari) ಈ ಹಿಂದೆಯೇ ಹೇಳಿಕೊಂಡಿದ್ದರು. ಅವರಿಗಾಗಿಯೇ ಕಥೆ ಬರೆಯುತ್ತಿರುವುದಾಗಿಯೂ ತಿಳಿಸಿದ್ದರು. ಅಲ್ಲದೇ, ನಂದಕಿಶೋರ್ (Nandakishore) ಕೂಡ ಕಿಚ್ಚನಿಗಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ. ಆ ಕಥೆಯೂ ಲಾಕ್ ಆಗಿದೆ.
ಚರಣ್ ತಮಿಳಿನಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟವರು. ತಮ್ಮ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ. ಸುದೀಪ್ ಗಾಗಿ ಪ್ಯಾನ್ ಇಂಡಿಯಾ ಸಿನಿಮಾವನ್ನು ಅವರು ಮಾಡಲಿದ್ದಾರಂತೆ. ಅಧಿಕೃತವಾಗಿ ಈ ವಿಷಯವನ್ನು ಚರಣ್ ಆಗಲಿ ಅಥವಾ ಸುದೀಪ್ ಆಗಲಿ ಹೇಳದೇ ಇದ್ದರೂ ಗಾಂಧಿನಗರದಲ್ಲಂತೂ ಈ ಸುದ್ದಿ ಭರ್ಜರಿಯಾಗಿ ಸೇಲ್ ಆಗುತ್ತಿದೆ.