ಸ್ಯಾಂಡಲ್‌ವುಡ್ ಯಜಮಾನ ಇಲ್ಲದ ಜಾಗವಾಯ್ತಾ..? ಬಣ್ಣದ ಲೋಕ ಧಗಧಗಿಸುತ್ತಿದೆ. ಒಂದು ಕುಟುಂಬ ಮನೆಯೊಂದು ಮೂರು ಬಾಗಿಲು ಆಗಿದೆ. ಒಂದ್ಕಡೆ ನಿರ್ಮಾಪಕರು ಇನ್ನೊಂದ್ಕಡೆ ಖ್ಯಾತ ನಟ. ಇನ್ನೊಂದ್ಕಡೆ ವಾಣಿಜ್ಯ ಮಂಡಳಿ. ಅಂಬಿ ಇದ್ದಾಗ `ಏಯ್ ಸುಮ್ನಿರ್ರೋ’ ಅನ್ನುವ ಒಂದ್ ಮಾತ್ ಬಂದ್ರೆ ಸಾಕಿತ್ತು ಎಲ್ರೂ ಸುಮ್ಮನಾಗುತ್ತಿದ್ದರು. ಆ ಜಾಗ ಈಗ ತುಂಬುವರ‍್ಯಾರು..? ಶಿವಣ್ಣ (Shivaraj Kumar) ಮೇಲೆ ಆ ಕೋರಿಕೆ ಬರ್ತಿದೆಯಾ? ಶಿವಣ್ಣ ನ್ಯಾಯ ತೀರ್ಮಾನ ಮಾಡುವ ಜಾಗ ತುಂಬ್ತಾರಾ? ಒಂದು ವಾರದಲ್ಲಿ ಏನಾಗುತ್ತದೆ ಬದಲಾವಣೆ? ಧಗಧಗಿಸುತ್ತಿರುವ ಕಿಚ್ಚಿಗೆ ನೀರು ಸುರಿಯುವವರ‍್ಯಾರು?
Advertisement
ರಾಜನಿಲ್ಲದ ಸಾಮ್ರಾಜ್ಯದಲ್ಲಿ ಶತ್ರುಗಳ ಕಾಟ. ನ್ಯಾಯ ತೀರ್ಮಾನಗಳ ಪರಿತಾಪ ಇದ್ದಿದ್ದೇ. ಕುಟುಂಬವೊಂದು ಅಚ್ಚುಕಟ್ಟಾಗಿ ಸಾಗಬೇಕು ಅಂದ್ರೆ ಯಜಮಾನ ಬೇಕಾಗ್ತಾನೆ. ಇದೀಗ ಅಂತಹ ಯಜಮಾನರಿಲ್ಲದ್ದಕ್ಕೆ ಗೊಂದಲದ ಗೂಡಾಗಿದೆಯಾ ಸ್ಯಾಂಡಲ್‌ವುಡ್ ? ಸ್ಯಾಂಡಲ್‌ವುಡ್ ಈಗ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ. ಗಾಂಧಿನಗರದ ಚಿಕ್ಕ ಆಫೀಸ್‌ನಲ್ಲಿ ಶುರುವಾಗುವ ವ್ಯಾವಹಾರಿಕ ಚರ್ಚೆ ಮುಂದೆ ವಿಶ್ವದಾದ್ಯಂತ ವ್ಯಾಪಿಸುತ್ತದೆ. ಕಾರಣ ಈಗ ಸಿನಿಮಾ ಒಂದು ದೊಡ್ಡ ಉದ್ಯಮ. ಹೀಗಿದ್ದರೂ ಒಳಜಗಳ, ವೈಷಮ್ಯ ವೈಮನಸ್ಸು ಹಾದಿಬೀದಿಯಲ್ಲಿ ಚರ್ಚೆಯಾಗುವಂತಾಗ್ತಿರೋದು ಯಾಕೆ?
Advertisement
Advertisement
ಚಂದನವನ ಒಂದು ಚೆಂದದವನದಂತೆ ಈಗ ದೇಶದ ಸಿನಿ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆದುಕೊಂಡಿದೆ. ಇಲ್ಲಿ ಸೆಟ್ಟೇರುವ ಪ್ರತಿ ಸ್ಟಾರ್‌ಗಳ ಸಿನಿಮಾವೂ ಈಗ ವರ್ಲ್ಡ್‌ವೈಡ್ ಬ್ಯುಸಿನೆಸ್ ಮಾಡುತ್ತಿದೆ. ಕ್ವಾಂಟಿಟಿ ಅಲ್ಲ ಕ್ವಾಲಿಟಿ ಕೊಡಬೇಕು ಎನ್ನುವ ಹಠ ಹಪಾಹಪಿ ಗಾಂಧಿನಗರದಲ್ಲಿ ಹೆಚ್ಚುತ್ತಿದೆ. ಈ ಧಾವಂತದಲ್ಲಿ ಒಳಗೊಳಗೇ ಮಸಲತ್ತುಗಳು ನಡೆದು ಗಿಡ ಇದ್ದ ಅಸಮಾಧಾನ ಹೆಮ್ಮರವಾಗಿ ಬೆಳೆಯಲಾರಂಭಿಸುತ್ತದೆ. ಅದಕ್ಕೆ ಕಾರಣ ಯಜಮಾನ ಇಲ್ಲದಿರುವುದೇ..?
Advertisement
ಅಂಬರೀಶ್ ನಿಧನದ ಬಳಿಕ ಕಲಾವಿದರ ಸಂಘದ ಅಧ್ಯಕ್ಷರ ಸ್ಥಾನವನ್ನ ಇನ್ಯಾರಿಗೂ ತುಂಬಲಾಗಲಿಲ್ಲ. ಅದು ಸಹಜವೇ. ಅಂಬರೀಶ್ ನ್ಯಾಯ ತೀರ್ಮಾನ ಅಂಬಿ ಮಾತು ಎಂದರೆ ಎಲ್ಲರೂ ಒಪ್ಪುತ್ತಿದ್ದರು. ಯಾಕಂದ್ರೆ ಅಂಬಿ ಅಜಾತಶತ್ರು. ಎಲ್ಲರಿಗೂ ಬೇಕಾದವರು. ಎಲ್ಲರನ್ನೂ ಒಂದೇ ಸಮನೆ ಕಾಣುವವರು. ಅಂಬಿ ನೇತೃತ್ವದಲ್ಲಿ ಬಗೆ ಹರಿದ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಆದರೆ ಯಾವಾಗ ಅಂಬಿ ಕಾಲವಾದರೋ ಅಂದಿನಿಂದ ಯಜಮಾನರ ಸ್ಥಾನ ಖಾಲಿ ಇದೆ. ಆ ಜಾಗ ತುಂಬುವಂತೆ ದೊಡ್ಮನೆಯ ಹಿರಿಯಣ್ಣ ಶಿವಣ್ಣ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಬೇಡಿಕೆ ಬರುತ್ತಲೇ ಇರುತ್ತೆ. ಆದರೆ ಇದುವರೆಗೂ ಅದು ಯಾವ ಹಂತವನ್ನೂ ತಲುಪಿಲ್ಲ.
ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ನೋಡುವುದಾದರೆ ಸ್ಯಾಂಡಲ್‌ವುಡ್ ಒಂದು ಮನೆಯೂ ಅಲ್ಲ, ಕುಟುಂಬವೂ ಅಲ್ಲ. ಅದೊಂದು ಸಂಘ. ಆದರೆ ಕೌಟುಂಬಿಕ ವ್ಯವಸ್ಥೆಯ ನೆಲೆಗಟ್ಟಿನಲ್ಲಿ ಬದುಕುತ್ತಿರುವ ನಟ, ನಿರ್ಮಾಪಕ, ಕಲಾವಿದರ ಬಳಗಕ್ಕೆ ಯಜಮಾನ ಎಂಬ ವ್ಯಕ್ತಿಯ ಅವಶ್ಯಕತೆ ತೋರಿಸಿಕೊಟ್ಟಿದ್ದು ಡಾ.ರಾಜ್‌ಕುಮಾರ್. ಸಭೆ-ಸಮಾರಂಭ, ಸಂಭ್ರಮ-ಹೋರಾಟ ಏನೇ ಇದ್ದರೂ ಮುಂದಾಳತ್ವ ವಹಿಸಿಕೊಂಡು ಹಿರಿಯರಾಗಿ ಸಾಗುತ್ತಾ, ಸಾಗುವ ದಾರಿಯಲ್ಲಿ ಕಿರಿಯರನ್ನ ಸೇರಿಸಿಕೊಂಡು ಹೋಗುವುದನ್ನ ಕಲಿಸಿದ್ದಾರೆ. ಅದು ಗೌರವ. ಅದೇ ಕುಟುಂಬ. ಅದುವೇ ನಂಬಿಕೆ.
ಡಾ.ರಾಜ್ ಕುಮಾರ್ ಬಳಿಕ ಆ ಸ್ಥಾನವನ್ನ ತುಂಬಿದ್ದು ಅಂಬರೀಶ್. ಆದರೆ ಅಂಬರೀಶ್ ಬಳಿಕ ಯಜಮಾನರ ಸ್ಥಾನದಲ್ಲಿ ನೋಡಲಾಗ್ತಿರೋದೇ ಶಿವರಾಜ್‌ಕುಮಾರ್‌ರನ್ನ. ಶಿವಣ್ಣ ಕೂಡ ಅಜಾತಶತ್ರು. ಎಲ್ಲರಿಗೂ ಬೇಕಾದವರು. ಎಲ್ಲರನ್ನೂ ಒಂದೇ ರೀತಿ ನೋಡುವವರು. ಎಲ್ಲರನ್ನೂ ಕೈ ಹಿಡಿದು ಮುನ್ನಡೆಸುವವರು. ಜೊತೆಗೆ ಹಿರಿಯರು, ಅನುಭವಸ್ಥರು. ಹೀಗಾಗೇ ಹಲವು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಖಾಲಿ ಇರುವ ಜಾಗ ತುಂಬೋಕೆ ಶಿವಣ್ಣಗೆ ಬೇಡಿಕೆ ಬರ್ತಿದೆ. ಆದರೆ ಶಿವಣ್ಣ ಆ ಸ್ಥಾನದ ಮೇಲೆ ಒಲವಿಲ್ಲ ಎಂದು ಹೇಳಿಕೊಂಡೇ ಬಂದಿದ್ದಾರೆ. ಆದರೆ ಜನ ಬಿಡಬೇಕಲ್ಲ? ಈ ಬಾರಿ ಸಿಂಹದ ಮರಿಯನ್ನ ಯಜಮಾನರ ಸ್ಥಾನದಲ್ಲಿ ಕೂರಿಸಲೇಬೇಕೆನ್ನುವುದು ಸ್ಯಾಂಡಲ್‌ವುಡ್ ಅನೇಕರ ಪಟ್ಟು.
ಶಿವನಂತೆ ಶಿವಣ್ಣರದ್ದೂ ಕರಗೋ ಮನಸ್ಸು. ತಥಾಸ್ತು ಎಂದು ಬಿಡ್ತಾರೆ. ಹೀಗಾಗೇ ಎಲ್ಲರ ಬೇಡಿಕೆಯೂ ಒಂದೇ ಆದ ಪಕ್ಷದಲ್ಲಿ ಅದರ ಬಗ್ಗೆಯೂ ಗಮನ ಕೊಡ್ತೀನಿ ಎಂದಿದ್ದಾರೆ ಶಿವಣ್ಣ. ಅಲ್ಲದೇ ಈಗ ನಡೆಯುತ್ತಿರುವ ಸುದೀಪ್ ಹಾಗೂ ಕೆಲ ನಿರ್ಮಾಪಕರ ನಡುವಿನ ಗಲಾಟೆಗೂ ಒಂದು ವಾರದಲ್ಲಿ ಪರಿಹಾರ ಕಂಡುಕೊಳ್ಳೋದಾಗಿ ತಿಳಿಸಿದ್ದು ವಿಶೇಷ.
ಕಿಚ್ಚ ಸುದೀಪ್ (Sudeep) , ಎನ್ ಕುಮಾರ್ (N. Kumar) ಇನ್ನೊಂದ್ಕಡೆ, ಹುಚ್ಚ ನಿರ್ಮಾಪಕ ರೆಹಮಾನ್ ಮತ್ತೊಂದ್ಕಡೆ ಜಾಕ್ ಮಂಜು ಎಲ್ಲವನ್ನೂ ನೋಡ್ತಿರುವ ಫಿಲ್ಮ್ ಚೇಂಬರ್ ಹಾಗೂ ನಿರ್ಮಾಪಕರ ಸಂಘ…ಎಲ್ಲಿಂದ ಶುರುವಾಯ್ತು, ಎಲ್ಲಿಗೆ ಬಂತು. ದಿನದಿಂದ ದಿನಕ್ಕೆ ಒಂದೊಂದು ತಿರುವು. ಮಾತಿನ ಯುದ್ಧ. ಟಕ್ಕರ್. ಫೈಯರ್. ಕಿಚ್ಚು ಧಗಧಗಿಸುತ್ತಿದೆ. ಪೂರ್ತಿ ಸುಡೋಕೂ ಮುನ್ನ ನೀರು ಹಾಕೋವ್ರ ಅವಶ್ಯಕತೆ ಇದೆ. ಬಹುಶಃ ಸರಿಯಾಗಿ ಯಜಮಾನರಿಲ್ಲದ ಕಾರಣಕ್ಕೆ ಸ್ಯಾಂಡಲ್‌ವುಡ್‌ಗೆ ಈ ಪರಿಸ್ಥಿತಿ ಬಂತಾ? ಕೋರ್ಟ್ ಕಟಕಟೆ, ಕಾನೂನು ಮೂಲಕ ಹೋರಾಟ ನಡೆಯುತ್ತಿದೆ. ಮಾನನಷ್ಟ, ಮಾನಹಾನಿ, ಸಂಭಾವನೆ, ಡೇಟ್ಸ್ ಎಲ್ಲ ಮಾತುಗಳೂ ಮುಗಿದುಹೋಗಿದೆ. ಕಡ್ಡಿ ಗುಡ್ಡವಾಗಿದೆ. ಇದನ್ನ ಶಮನ ಮಾಡೋದ್ಯಾರು..?
ಕೊನೆಗೂ ಈ ಬೆಂಕಿಯನ್ನ ತಣಿಸಲು ಶಿವಣ್ಣ ಎಂಟ್ರಿ ಆಗುತ್ತಾ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಯಾಕಂದ್ರೆ ಸಹೋದರ ಸಮಾನ ಕಿಚ್ಚ ಸುದೀಪ್ ಮೇಲೆ ಬಂದಿರೋ ಆರೋಪಕ್ಕೆ ಶಿವಣ್ಣ ನ್ಯಾಯಸಮ್ಮತ ತೀರ್ಮಾನಕ್ಕೆ ನಿಲ್ಲುವ ಸೂಚನೆ ಕಂಡುಬರುತ್ತಿದೆ. ಒಟ್ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಇನ್ನೊಂದು ವಾರದಲ್ಲಿ ಮಹತ್ವದ ಬೆಳವಣಿಗೆಯಾದರೂ ಆಶ್ಚರ್ಯವಿಲ್ಲ
Web Stories