ನಟ ಕಿಚ್ಚ ಸುದೀಪ್ (Sudeep) ಅವರ ಖಾಸಗಿ ವಿಡಿಯೋ (Private Video) ಬಹಿರಂಗ ಪಡಿಸುವುದಾಗಿ ಬರೆದ ಬೆದರಿಕೆ ಪತ್ರದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ನಿನ್ನೆಯಷ್ಟೇ ಸುದೀಪ್ ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವು ಸಿಕ್ಕಿದೆ. ಸುದೀಪ್ ಮನೆಗೆ ಬಂದಿದ್ದ ಆ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿವೆ ಎಂದು ಹೇಳಲಾಗುತ್ತಿದೆ. ಆ ಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ (CCB)ತನಿಖೆ ಶುರುವಾಗಿದ್ದು, ಶಂಕೀತ ಜಾಡು ಹಿಡಿದು ಹೊರಟಿದ್ದಾರಂತೆ ಸಿಸಿಬಿ ಅಧಿಕಾರಿಗಳು.
Advertisement
ಮೊದಲ ಪತ್ರ ಬಂದಾಗ ಸುದೀಪ್ ಅವರೇ ನಿರ್ಲಕ್ಷ್ಯ ವಹಿಸಿದ್ದರಂತೆ. ದುಷ್ಟರು ಬರೆದ ಮೊದಲನೇ ಪತ್ರಕ್ಕೆ ಯಾವಾಗ ಸುದೀಪ್ ರಿಯಾಕ್ಟ್ ಆಗ್ಲಿಲ್ವೋ, ಈತ ಏನೂ ಮಾಡಲ್ಲ ಎಂಬ ಭಂಡ ಧೈರ್ಯದಿಂದ ಮತ್ತೊಂದು ಪತ್ರ ಕಳಿಸಿದ್ದಾನಂತೆ ಆ ಭೂಪ. ಯಾವಾಗ ಎರಡನೇ ಪತ್ರ ಕೈ ಸೇರಿತೋ ಇದರ ಗಂಭೀರತೆಯನ್ನು ಅರಿತು ಕಾನೂನು ಪ್ರಕ್ರಿಯೆಯೇ ಸೂಕ್ತ ಎಂದು ತಮ್ಮ ಆಪ್ತ ಜಾಕ್ ಮಂಜು ಮೂಲಕ ದೂರು ನೀಡಿದ್ದರು ಸುದೀಪ್. ಸದ್ಯ ಈ ಪತ್ರದ ಸುತ್ತ ಪೊಲೀಸರು ತನಿಖೆಗಿಳಿದಿದ್ದಾರೆ. ಇದನ್ನೂ ಓದಿ: ಯಶ್ ಜೊತೆ ದಿಲ್ ರಾಜು ಹೊಸ ಸಿನಿಮಾ- ಅಪ್‌ಡೇಟ್ ಹಂಚಿಕೊಂಡ ನಿರ್ಮಾಪಕ
Advertisement
Advertisement
ಮಾರ್ಚ್ 10ನೇ ತಾರೀಕು ಸುದೀಪ್ ಮನೆಗೆ ಮೊದಲ ಪತ್ರ ತಲುಪಿದೆ. ಆ ಪತ್ರದ ಬಗ್ಗೆ ಅಷ್ಟಾಗಿ ಸುದೀಪ್ ತಲೆ ಕೆಡಿಸಿಕೊಂಡಿರಲಿಲ್ಲ. ಆದರೂ ಇಂಟರ್ ನಲ್ ಎನ್ಕೈರಿಯಂತೆ ಮಾಹಿತಿಯನ್ನು ಕಲೆ ಹಾಕುವುದಕ್ಕೆ ಯತ್ನಿಸಿದ್ದರಂತೆ. ಅದರ ಬೆನ್ನಲ್ಲೆ ಮತ್ತೊಂದು ಪತ್ರ ಬಂದಿದ್ದರಿಂದ ಸಹಜವಾಗಿಯೇ ಇದು ಗಂಭೀರ ಪ್ರಕರಣ ಅನಿಸಿ ದೂರು ನೀಡಲಾಗಿತ್ತು. ಇನ್ನು ಆ ಪತ್ರದ ಮೂಲ ಹುಡುಕುತ್ತಾ ಹೋದಾಗ ಸಿಕ್ಕಿದ್ದು ದೊಮ್ಮಲೂರು ಪೋಸ್ಟ್ ಬಾಕ್ಸ್. ಸುದೀಪ್ ಮನೆಗೆ ಬಂದ ಎರಡೂ ಪತ್ರಗಳು ದೊಮ್ಮಲೂರಿನಿಂದ ಬಂದಿದ್ದವು. ಹೀಗಾಗಿ ಆ ಪತ್ರವನ್ನು ಯಾರು ಪೋಸ್ಟ್ ಮಾಡಿದ್ದು ಎಂಬುದರ ಬಗ್ಗೆ ಅಲ್ಲಿನ ಸಿಸಿಟಿವಿ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ.
Advertisement
ಈ ಹಿಂದೆ ಸುದೀಪ್ ಜೊತೆ ಇದ್ದ ಕಾರು ಚಾಲಕನ (Car Driver) ಮೇಲೆ ಪೊಲೀಸರಿಗೆ ಬಲವಾದ ಶಂಕೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ದೂರು ದಾಖಲಿಸಿ ತನಿಖೆ ನಡೆಸಿದ್ದ ಪುಟ್ಟೇನಹಳ್ಳಿ ಪೊಲೀಸರು ಸುದೀಪ್ ಮನೆಯಲ್ಲಿ ಸ್ಪಾಟ್ ಇನ್ವೆಷ್ಟಿಗೇಷನ್ ಕೂಡ ನಡೆಸಿದ್ದಾರೆ. ಕೆಲವೊಂದು ಸಾಂದರ್ಭಿಕ ಸಾಕ್ಷಿಗಳ ಅನ್ವಯ ಈ ಹಿಂದೆ ಇದ್ದ ಸುದೀಪ್ ಮನೆಯ ಕಾರು ಚಾಲಕನ ಮೇಲೆ ಅನುಮಾನ ಬಂದಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ವರದಿಯನ್ನು ಪುಟ್ಟೇನಹಳ್ಳಿ ಪೊಲೀಸರು ಸಿಸಿಬಿಗೆ ನೀಡಿದ್ದಾರೆ. ಇನ್ನು ಈ ಕಾರು ಚಾಲಕನನ್ನು ಬಳಸಿಕೊಂಡು ಚಿತ್ರ ರಂಗದ ಆ ವ್ಯಕ್ತಿ ಕೃತ್ಯವನ್ನು ಎಸಗಿದ್ದನಾ ಎಂಬ ಶಂಕೆ ವ್ಯಕ್ತವಾಗಿದೆ. ಇದೊಂದು ಪ್ರೀ ಪ್ಲಾನ್ ಕೃತ್ಯ ಎಂಬುದಕ್ಕೆ ಸಿಸ್ಟಂ ಟೈಪಿಂಗ್ ಪತ್ರವೇ ಸಾಕ್ಷಿಯಾಗಿದೆ. ಕೈ ಬರಹ ಪತ್ರವನ್ನು ಕಳಿಸಿದರೆ ಸಾಕ್ಷಿ ಸಿಗುತ್ತೆ ಎಂಬ ಕಾರಣಕ್ಕೆ ಟೈಪ್ ಮಾಡಿ ಆ ಪತ್ರವನ್ನು ಪೋಸ್ಟ್ ಮಾಡಲಾಗಿದೆ. ಪೊಲೀಸರು ದೂರು ಪಡೆದುಕೊಳ್ಳುವಾಗಲೇ ಇದೊಂದು ಕ್ರಿಮಿನಲ್ ಕಾನ್ಸ್ ಪೆರೆಸಿ ಎಂದು ತಿಳಿದು ಸೆಕ್ಷನ್ 120b ಒಳಸಂಚು ಅಡಿಯಲ್ಲಿ ಕೇಸು ದಾಖಲಿಸಿದ್ದರು. ಸದ್ಯ ಅವರ ಅನುಮಾನ ಕೂಡ ನಿಜವಾಗ್ತಿದೆ ಎಂಬುದಕ್ಕೆ ಸಿಸಿಬಿಗೆ ಸಿಕ್ಕ ಬೇಸಿಕ್ ಇನ್ಪಾರ್ಮೇಷನ್ ಗಳೆ ಸಾಕ್ಷಿಯಾಗಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯ ಸೈಬರ್ ವಿಂಗ್ ಕೂಡ ಕೆಲಸ ಮಾಡುತ್ತಿದ್ದು ಮುಂದಿನ ದಿನದಲ್ಲಿ ನಟ ಸುದೀಪ್ ಗೂ ನೊಟೀಸ್ ನೀಡಿ ಹೇಳಿಕೆಗಳನ್ನು ಪಡೆಯಲು ಸಿದ್ಧತೆಯನ್ನ ನಡೆಸುತ್ತಿದ್ದಾರೆ. ಸದ್ಯ ಆ ಕಾರು ಚಾಲಕ ಸಿಕ್ಕ ಬಳಿಕವಷ್ಟೇ ಅಸಲಿ ಸಂಗತಿ ಹೊರ ಬರಬೇಕಿದೆ.