ಮೋದಿ ಕುರಿತ BBC ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾದ ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

Public TV
2 Min Read
Jamia Millia Islamia vv 1

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸಂಬಂಧಿಸಿದ ಬಿಬಿಸಿ (BBC) ವಿವಾದಾತ್ಮಕ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ (Jamia Millia Islamia University) ಮೂವರು ಎಡಪಂಥೀಯ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಟೂಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾವು ಕ್ಯಾಂಪಸ್‌ನಲ್ಲಿ ಸಾಕ್ಷ್ಯಚಿತ್ರ ಸ್ಕ್ರೀನಿಂಗ್‌ ಮಾಡಲಾಗುವುದು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದನ್ನು ಗಮನಿಸಿ ತಕ್ಷಣ ಎಚ್ಚೆತ್ತ ವಿವಿ ಆಡಳಿತ ಮಂಡಳಿ, ಕ್ಯಾಂಪಸ್‌ನಲ್ಲಿ ಯಾವುದೇ ಅನಧಿಕೃತ ಕೂಟಗಳಿಗೆ ಅವಕಾಶ ಕಲ್ಪಿಸದಿರಲು ಕ್ರಮವಹಿಸಿದೆ. ಜೊತೆಗೆ ಪೊಲೀಸರು, ಅಶ್ರುವಾಯು ದಳ ಸಿಬ್ಬಂದಿ ಕೂಡ ದೆಹಲಿ ಕಾಲೇಜು ಗೇಟ್‌ ಬಳಿ ಜಮಾಯಿಸಿದ್ದಾರೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರಕ್ಕೆ ವಿರೋಧ – ಟೀಕೆಗೆ ಗುರಿಯಾಗಿದ್ದ ಎ.ಕೆ.ಆ್ಯಂಟನಿ ಪುತ್ರ ಕಾಂಗ್ರೆಸ್‌ಗೆ ರಾಜೀನಾಮೆ

Jamia Millia Islamia vv

ಪ್ರಧಾನಿ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದ್ದ ಗಲಭೆ (2002 – ಗೋಧ್ರಾ ಹತ್ಯಾಕಾಂಡ) ಆಧರಿಸಿ ಬಿಬಿಸಿ ಸಾಕ್ಷ್ಯಚಿತ್ರ ಮಾಡಿದೆ. ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದು, ಸಾಮಾಜಿಕ ಮಾಧ್ಯಮ ಕಂಪನಿಗಳು ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ತೆಗೆದುಹಾಕುವಂತೆ ಸೂಚಿಸಿದೆ. ಆದರೆ ಕೇಂದ್ರದ ಧೋರಣೆಗೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿವೆ. ಇದು ಘೋರ ಸೆನ್ಷಾರ್‌ಶಿಪ್‌ ಎಂದು ಕಿಡಿಕಾರಿವೆ.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಸಂಜೆ ವಿದ್ಯಾರ್ಥಿಗಳ ವಿಭಾಗವು ಸಾಕ್ಷ್ಯಚಿತ್ರ ಸ್ಕ್ರೀನಿಂಗ್ ಮಾಡಲು ಮುಂದಾಗಿತ್ತು. ಆದರೆ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಇಂಟರ್ನೆಟ್ ಮತ್ತು ವಿದ್ಯುತ್ ಎರಡೂ ಸ್ಥಗಿತಗೊಂಡಿದ್ದರಿಂದ ತೊಂದರೆಯಾಯಿತು. ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಜೆಎನ್‌ಯು ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಈ ಕ್ರಮವು ಕ್ಯಾಂಪಸ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು ಎಂದು ಹೇಳಲಾಗಿದೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ದಂಗಲ್ – ಜೆಎನ್‍ಯುನಲ್ಲಿ ಇಂಟರ್‌ನೆಟ್, ವಿದ್ಯುತ್ ಸ್ಥಗಿತ

ಏನಿದು ಗೋಧ್ರಾ ಹತ್ಯಾಕಾಂಡ?
ಗುಜರಾತ್‌ನ ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ 59 ಕರಸೇವಕರು ಸುಟ್ಟು ಹೋಗಿದ್ದರು. ಇದಕ್ಕೆ ಪ್ರತಿಕಾರವಾಗಿ ಗುಜರಾತ್‌ನ ಅನೇಕ ಕಡೆಗಳಲ್ಲಿ ಕೋಮು ಗಲಭೆ ನಡೆಯಿತು. ಅದರಲ್ಲಿ 1,200 ಮಂದಿ ಹತ್ಯೆಯಾದರು. ಸತ್ತವರ ಪೈಕಿ ಬಹುತೇಕರು ಮುಸ್ಲಿಮರು. ಗುಜರಾತ್‌ ಗಲಭೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದರು. ಗಲಭೆ ನಿಯಂತ್ರಣಕ್ಕೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪಗಳು ಕೇಳಿಬಂದಿತ್ತು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *