– ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸಚಿವರ ಸೂಚನೆ
ಬೆಂಗಳೂರು: ವಿದ್ಯಾರ್ಥಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೆ ಭಾರೀ ಮುಜುಗರವಾಗಿದೆ.
ವಿಧಾನಸೌಧದಲ್ಲಿ ಇಂದು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ NEET, JEE, CET ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಈ ವೇಳೆ ವಿದ್ಯಾರ್ಥಿಗಳ (Students) ಜೊತೆ ಮಧು ಬಂಗಾರಪ್ಪ ವಿಡಿಯೋ ಕಾನ್ಫರೆನ್ಸ್ (video conference) ಮೂಲಕ ಸಂವಾದ ನಡೆಸುತ್ತಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ (Kannada) ಬರಲ್ಲ ಎಂದು ನೇರವಾಗಿಯೇ ಹೇಳಿದ್ದಾನೆ.
ಈ ಮಾತನ್ನು ಕೇಳಿಸಿಕೊಂಡ ಮಧು ಬಂಗಾರಪ್ಪ, ಯಾರೋ ಅದು ಹೇಳಿದ್ದು, ಏನಂತ ಹೇಳಿದ್ದು? ನಾನೇನು ಉರ್ದು ಮಾತಾಡಿದ್ನಾ? ಕನ್ನಡದಲ್ಲೇ ಮಾತನಾಡಿದ್ದು ಎಂದು ಗರಂ ಆದರು. ನಂತರ ಪಕ್ಕದಲ್ಲಿ ಕುಳಿತಿದ್ದ ಪದವಿ ಪೂರ್ವ ಕಾಲೇಜು ನಿರ್ದೇಶಕಿ ಸಿಂಧೂ ಬಿ ರೂಪೇಶ್ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಅವರಲ್ಲಿ, ಯಾರು ನೋಡಿ ರೆಕಾರ್ಡ್ ಮಾಡಿ. ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಇದನ್ನೂ ಓದಿ: ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಬ್ಲಾಸ್ಟ್ – ಮೃತ ಯೋಧನ ಪತ್ನಿಯ ಎರಡೂ ಕೈಗಳು ಕಟ್
ಮಾಧ್ಯಮಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಸಮ್ಮುಖದಲ್ಲೇ ವಿದ್ಯಾರ್ಥಿ ನೇರವಾಗಿ ಹೇಳಿದ್ದರಿಂದ ತಕ್ಷಣವೇ ಗಲಿಬಿಲಿಗೊಂಡ ಮಧು ಬಂಗಾರಪ್ಪ, ಹೇ ಯಾರೋ ಅವನು ಹಾಗೆ ಮಾತನಾಡೋದು? ಯಾರು ಹಾಗೇ ಅಂದವರು ಡೀಟೇಲ್ಸ್ ತೆಗೆದುಕೊಳ್ಳಿ ಎಂದು ಗರಂ ಆಗಿ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು ಸದ್ಯಕ್ಕೆ ಈ ರೀತಿ ಹೇಳಿದ ವಿದ್ಯಾರ್ಥಿ ಯಾರು ಎನ್ನುವುದು ತಿಳಿದುಬಂದಿಲ್ಲ.