ಯಾದಗಿರಿ: ಸರ್ಕಾರ ಮಕ್ಕಳಿಗೆ ಶಿಕ್ಷಣ ನೀಡಲು ಕೋಟ್ಯಾಂತರ ರೂಪಾಯಿ ವೆಚ್ಛ ಮಾಡುತ್ತಿದೆ. ಆದರೆ ಶಿಕ್ಷಣ ಇಲಾಖೆ ಎಡವಟ್ಟಿನಿಂದ ಸರ್ಕಾರದ ಹಣ ಪೋಲಾಗುವಂತಾಗಿದೆ. ಯಾಕಂದ್ರೆ ಬಡ ಗ್ರಾಮೀಣ ಮಕ್ಕಳ ಕೈಗೆ ಇನ್ನೂ ಉಚಿತ ಪಠ್ಯಪುಸ್ತಕ ಸಿಕ್ಕಿಲ್ಲ. ಶಾಲೆ ಆರಂಭವಾಗಿ ಎರಡು ತಿಂಗಳು ಗತಿಸಿದ್ರೂ ವಿದ್ಯಾರ್ಥಿಗಳಿಗೆ ಪುಸ್ತಕ ಸರಬರಾಜು ಮಾಡದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ವ್ಯಾಸಂಗದ ಮೇಲೆ ಪರಿಣಾಮ ಬಿರಿದೆ.
ಶಿಕ್ಷಣ ಇಲಾಖೆ ಪ್ರತಿ ವರ್ಷ ಗುಣಮಟ್ಟ ಶಿಕ್ಷಣ ನೀಡಲು ಪ್ರಯತ್ನಪಟ್ಟರೂ ಸರಿಯಾಗಿ ಪಠ್ಯಪುಸ್ತಕ ಹಾಗೂ ಶಿಕ್ಷಕರ ಕೊರತೆಯ ಕಾರಣದಿಂದ ಉತ್ತಮ ಫಲಿತಾಂಶ ಬರುತ್ತಿಲ್ಲ. ಶಾಲೆ ಆರಂಭದಲ್ಲಿಯೇ ಮಕ್ಕಳಿಗೆ ಸರಿಯಾಗಿ ಶಿಕ್ಷಕರು ಬೋಧನೆ ಮಾಡಿದರೆ ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ. ಆದರೆ ಆರಂಭದಲ್ಲಿಯೇ ಯಾದಗಿರಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಪೂರೈಕೆ ಮಾಡಿಲ್ಲ.
ಯಾದಗಿರಿ, ಸುರಪುರ, ಶಹಾಪುರ ಮೊದಲಾದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಕೈಗೆ ಪುಸ್ತಕಗಳು ಸಿಕ್ಕಿಲ್ಲ. ಶಿಕ್ಷಣ ಇಲಾಖೆ 1 ರಿಂದ 9 ನೇ ತರಗತಿ ವರಗೆ ಈ ವರ್ಷ ಪಠ್ಯ ಪರಿಷ್ಕರಣೆ ಮಾಡಿದ ಹಿನ್ನಲೆಯಲ್ಲಿ ಈ ಅವಾಂತರವಾಗಿದೆ.
ಶಿಕ್ಷಣ ಇಲಾಖೆ ಸರಿಯಾಗಿ ಮುಂಜಾಗ್ರತೆ ವಹಿಸಿ ಕ್ರಮ ಕೈಗೊಂಡಿದ್ದರೆ ಶಾಲೆ ಆರಂಭದ ದಿನಗಳಲ್ಲಿ ರಾಜ್ಯದ ಎಲ್ಲಾ ಶಾಲೆಗಳಿಗೆ ಪಠ್ಯಪುಸ್ತಕಗಳು ಪೂರೈಕೆಯಾಗುತ್ತಿದ್ದವು. ಆದರೆ ವಿದ್ಯಾರ್ಥಿಗಳು ಜ್ಞಾನ ಪಡೆಯಲು ಪುಸ್ತಕಗಳೇ ಮರಿಚಿಕೆಯಾಗಿವೆ.
2ನೇ ತರಗತಿಯ ಪರಿಸರ ಅಧ್ಯಯನ, 6ನೇ ತರಗತಿಯ ಸಮಾಜ ವಿಜ್ಞಾನ, 7ನೇ ತರಗತಿ ಸಮಾಜ ಭಾಗ-2 ಹಾಗೂ ಹಿಂದಿ ಪಠ್ಯ ಪುಸ್ತಕಗಳು ಹೀಗೆ ವಿವಿಧ ತರಗತಿಯ ಪಠ್ಯಪುಸ್ತಕಗಳನ್ನು ಜಿಲ್ಲೆಯ ಬಹುತೇಕ ಶಾಲೆಗಳಿಗೆ ಪೂರೈಕೆ ಮಾಡಿಲ್ಲ. ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದರೂ ಕೂಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಪೂರೈಕೆ ಆಗಿಲ್ಲ.
ಶಿಕ್ಷಣ ಇಲಾಖೆ ತಾಲೂಕಾವಾರು ಗೋದಾಮು ಮೂಲಕ ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು ಮಾಡಬೇಕು. ಆದರೆ ಇಲಾಖೆಯಿಂದ ಬೇಡಿಕೆಯಿದ್ದಷ್ಟು ಪಠ್ಯಪುಸ್ತಕಗಳು ಇನ್ನೂ ಗೋದಾಮುಗಳಿಗೆ ಕಳುಹಿಸಿಲ್ಲ. ಮಕ್ಕಳು ಶಾಲೆಗೆ ಬಂದು ಶಿಕ್ಷಕರು ಹೇಳಿದ್ದ ಪಾಠ ಕೇಳಿ ವಾಪಸ ತೆರಳುವಂತಾಗಿದೆ. ಶಿಕ್ಷಕರು ಕೂಡ ಪಠ್ಯ ಪುಸ್ತಕಗಳು ಪೂರೈಕೆಯಾಗದ ಹಿನ್ನಲೆಯಲ್ಲಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಎರಡು ತಿಂಗಳಿನಿಂದ ಶಾಲೆಗೆ ಪುಸ್ತಕ ಪೂರೈಕೆಯಾಗದ ಹಿನ್ನೆಲೆಯಲ್ಲಿ ಮಕ್ಕಳ ಓದಿನ ಮೇಲೆ ಪರಿಣಾಮ ಬಿರಲಿದೆ.
ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಮಕ್ಕಳ ವ್ಯಾಸಂಗಕ್ಕೆ ಧಕ್ಕೆಯಾಗಿದೆ. ಇನ್ನು ಮುಂದಾದರು ಶಿಕ್ಷಣ ಇಲಾಖೆ ಆದಷ್ಟು ಬೇಗ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಬೇಕಿದೆ.