ಮುಂಬೈ: ಅನಧಿಕೃತ ನೈಲಾನ್ ಗಾಳಿಪಟ ದಾರದಿಂದಾಗಿ 45 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಪುಣೆಯಲ್ಲಿ ನಡೆದಿದೆ.
ದಿನಪತ್ರಿಕೆಯೊಂದರಲ್ಲಿ ಮಾರ್ಕೆಟಿಂಗ್ ಮತ್ತು ಅಡ್ವರ್ಟೈಸಿಂಗ್ ಎಕ್ಸಿಕ್ಯೂಟಿವ್ ಆಗಿದ್ದ ಸುವರ್ಣ ಮಜುಮ್ದಾರ್ ಮೃತ ದುರ್ದೈವಿ. ಕಳೆದ ಬುಧವಾರದಂದು ಸುವರ್ಣ ಅವರು ಸಂಜೆ 6 ಗಂಟೆ ವೇಳೆಗೆ ಸ್ಕೂಟರ್‍ನಲ್ಲಿ ಮನೆಗೆ ಹೋಗುತ್ತಿದ್ರು. ಈ ವೇಳೆ ಕತ್ತಿನ ಭಾಗದಲ್ಲಿ ಏನೋ ತುರಿಕೆಯಾದಂತೆ ಅನುಭವವಾಗಿತ್ತು. ದಾರವನ್ನ ಹಿಡಿದು ಅವರು ಕೆರೆದುಕೊಳ್ಳುತ್ತಿದ್ದ ವೇಳೆ ಸಹೋದ್ಯೋಗಿಯೊಬ್ಬರು ಸುವರ್ಣ ಅವರ ಕತ್ತಿನ ಭಾಗದಲ್ಲಿ ಕುಯ್ದಂತೆ ಆಗಿರುವುದು ನೋಡಿದ್ದರು. ಏನಾಗಿದೆ ಎಂದು ಅರಿವಾಗುವಷ್ಟರಲ್ಲಿ ಸುವರ್ಣ ಪ್ರಜ್ಞೆ ತಪ್ಪಿ, ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಸುರ್ವಣ ಸಹೋದ್ಯೋಗಿಯೊಬ್ಬರು ಹೇಳಿದ್ದಾರೆ.
Advertisement
Advertisement
ಕೂಡಲೇ ಕಚೇರಿಗೆ ವಿಷಯ ತಿಳಿಸಿ ಸುವರ್ಣ ಅವರನ್ನ ಸೂರ್ಯ ಆಸ್ಪತ್ರೆಗೆ ಕರೆದೊಯ್ದರು. ನಂತರ ಅಲ್ಲಿಂದ ಪೂನಾ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಅಲ್ಲಿ ಸುವರ್ಣ ಅವರ ಗಾಯಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಯ್ತು. ತೀವ್ರ ರಕ್ತಸ್ರಾವವಾಗಿದ್ದರಿಂದ ಅವರಿಗೆ 8 ಬಾಟಲ್ ರಕ್ತ ಹಾಕಬೇಕಾಯ್ತು ಎಂದು ಹೇಳಿದ್ದಾರೆ.
Advertisement
ಸುವರ್ಣ ಅವರ ಕತ್ತಿನ ಮೇಲೆ 3 ಇಂಚು ಆಳದ ಕುಯ್ದ ಗಾಯವಾಗಿ ಸಾಕಷ್ಟು ರಕ್ತಸ್ರಾವವಾಗಿತ್ತು. ಕತ್ತಿನ ಭಾಗದಲ್ಲಿ ನರಗಳಿಗೆ ಹಾನಿಯಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಅವರ ತಲೆಗೆ ರಕ್ತಸಂಚಾರವಾಗದ ಕಾರಣ ಬ್ರೈನ್ ಡೆಡ್ ಆಗಿದೆ ಎಂದು ಶನಿವಾರ ರಾತ್ರಿ ಘೋಷಿಸಿದ್ರು ಎಂದು ಶಿವಾಜಿನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಪ್ರಭಾಕರ್ ಶಿಂಧೆ ಹೇಳಿದ್ದಾರೆ.
Advertisement
ಸುರ್ವಣ ಅವರ ಸಾವಿಗೆ ಕಾರಣವಾದ ನೈಲಾನ್ ದಾರ ಈಗಾಗಲೇ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಿಷೇಧಿತವಾಗಿದೆ. ಹೀಗಾಗಿ ಐಪಿಸಿ ಸೆಕ್ಷನ್ 304 ಹಾಗೂ 304(ಎ) ಅನ್ವಯ ಪ್ರಕರಣ ದಾಖಲಾಗಿದೆ. ಹತ್ತಿರದ ಸಿಸಿಟಿವಿ ಪರಿಶೀಲನೆ ನಡೆಸಿ ಹಾಗೂ ಕೆಲವು ಮಕ್ಕಳ ವಿಚಾರಣೆ ನಡೆಸಿ ತನಿಖೆ ಮಾಡುತ್ತಿದ್ದೇವೆ. ಈ ರೀತಿಯ ದಾರವನ್ನ ಮಾರುವ ಅಂಗಡಿಗಳಿಗೂ ಭೇಟಿ ನೀಡಲಿದ್ದೇವೆ ಹಾಗೂ ಅವರ ವಿರುದ್ಧವೂ ಪ್ರಕರಣ ದಾಖಲಿಸಲಿದ್ದೇವೆ ಎಂದು ಶಿಂಧೆ ಹೇಳಿದ್ದಾರೆ.