ಹಾವೇರಿ: ಕಾಂಗ್ರೆಸ್ ನಾಯಕರು ಮೊದಲು ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಮೂರನೇ ಬಾರಿ ಅವರು ಕೇಳಲಿಲ್ಲ. ಆದರೂ ಅವರೇ ಕರೆದು ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದರು. ಕೊನೆಗೆ ಮೋಸ ಮಾಡಿದರು ಎಂದು ರಾಜೀನಾಮೆ ನೀಡಿದ ಅತೃಪ್ತ ಶಾಸಕ ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಹೇಳಿದ್ದಾರೆ.
ಹಿರೇಕೆರೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಅವರ ಪರವಾಗಿ ನಿಂತಿದ್ದಾರೆ. ಅವರೊಬ್ಬರೇ ರಾಜೀನಾಮೆ ನಿರ್ಧಾರ ಮಾಡಿಲ್ಲ. ಮುಂಚಿತವಾಗಿ ಬೆಂಬಲಿಗರಿಗೆ ತಿಳಿಸಿ ರಾಜೀನಾಮೆ ನೀಡಿದ್ದಾರೆ. ಯಾವುದೇ ಅರ್ನಹತೆ ಭೀತಿ ಅವರಿಗಿಲ್ಲ. ಅವರು ಆರಾಮಾಗಿದ್ದಾರೆ. ಅವರು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ಬಿ.ಸಿ.ಪಾಟೀಲ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸೃಷ್ಟಿ ಪಾಟೀಲ್ ತಿಳಿಸಿದರು. ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ, ಪತಿಯ ನಡೆಗೆ ನಾವು ಬದ್ಧ – ಬಿ.ಸಿ ಪಾಟೀಲ್ ಪತ್ನಿ
ಮನಷ್ಯನಿಗೆ ಪದೆ ಪದೇ ಮೋಸ ಮಾಡಿದರೆ ಯಾರು ತಡೆದುಕೊಳ್ಳುತ್ತಾರೆ. ಪಕ್ಷದ ಉಳಿವಿಗಾಗಿ ಒಂದು ಸಚಿವ ಸ್ಥಾನ ನೀಡಬೇಕಿತ್ತು. ಪಕ್ಷೇತರರಿಗೆ ಸಚಿವ ಸ್ಥಾನ ನೀಡುವ ಅವಶ್ಯಕತೆ ಇರಲಿಲ್ಲ. ಪಕ್ಷ ಕಟ್ಟಿ ಬೆಳೆಸಿದ ವ್ಯಕ್ತಿಗೆ ಬೆಲೆ ಕೊಟ್ಟಿಲ್ಲ. ಹೀಗಾಗಿ ಅವರಿಗೆ ಬೇಜಾರಾಗಿ ರಾಜೀನಾಮೆ ಕೊಟ್ಟಿದ್ದಾರೆ. ಬಿ.ಸಿ.ಪಾಟೀಲ್ ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಅದು ಸುಳ್ಳು. ಪಕ್ಷದ ನಡವಳಿಕೆಯಿಂದ ಬೇಜಾರಾಗಿ ರಾಜೀನಾಮೆ ನೀಡಿದ್ದಾರೆ. ಆದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದರು.
ಮೊನ್ನೆ ಫೋನ್ ಮಾಡಿದ್ದಾಗ ಇದೇ ಮೊದಲ ಬಾರಿಗೆ ನಾನು ಹಿರೇಕೆರೂರು ಬಿಟ್ಟು ಒಂದು ತಿಂಗಳಾಗಿದೆ. ನಾನು ಜನರನ್ನು ನೋಡಬೇಕು. ಅವರ ಜೊತೆ ಮಾತನಾಡಬೇಕು ಎಂದು ಹೇಳುತ್ತಿದ್ದರು. ಆದಷ್ಟು ಬೇಗ ಹಿರೇಕೆರೂರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಕ್ಷೇತ್ರಕ್ಕೆ ಬಾರದೇ ಎಲ್ಲೂ ಹೋಗಲ್ಲ. ಅನರ್ಹ ಮಾಡಿದರೆ 5 ವರ್ಷದ ಚುನಾವಣೆಯಲ್ಲಿ ನಿಲ್ಲಬಾರದು ಎಂಬುದು ಇಲ್ಲ. 6 ತಿಂಗಳ ಒಳಗೆ ಚುನಾವಣೆಗೆ ನಿಲ್ಲಬಹುದು ಎಂದು 2018ರ ತೀರ್ಪಿನಲ್ಲಿ ರಾವತ್ ಹೇಳಿದ್ದಾರೆ ಎಂದು ಸೃಷ್ಟಿ ಹೇಳಿದರು.