– ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿ ಪ್ರಶಾಂತ್
– ಇಂಟರ್‌ಪೋಲ್ ನೆರವಿಗೆ ಮುಂದಾದ ಎಸ್‌ಐಟಿ
ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನಕಲಿ ಹಾಗೂ ಕಳಪೆ ಔಷಧ ಮಾರಾಟ ಜಾಲಕ್ಕೆ ಅಂತಾರಾಷ್ಟ್ರೀಯ ನಂಟು ಇರುವುದು ಬಯಲಾಗಿದ್ದು, ಪ್ರಕರಣದ ಪ್ರಮುಖ ರೂವಾರಿ ನಾಗರಬಾವಿಯ ಪ್ರಶಾಂತ್ ಹಾಗೂ ಆತನ ಇಬ್ಬರು ಸಹಚರರು ಪಶ್ಚಿಮ ಏಷ್ಯಾದ ದೇಶವೊಂದರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್(Customs) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಪಶ್ಚಿಮ ಏಷ್ಯಾದ ದೇಶದಲ್ಲಿ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಔಷಧಗಳು ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತವೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಪ್ರಶಾಂತ್ ತನ್ನ ಇಬ್ಬರು ಸಹಚರರ ಮೂಲಕ ಸ್ಕೆಚ್ ಹಾಕಿದ್ದ.
ವಿಮಾನ ನಿಲ್ದಾಣದಲ್ಲಿ ಭಾರೀ ಪ್ರಮಾಣದ ಔಷಧ ಸಾಗಣೆಯನ್ನು ಕಂಡು ಅನುಮಾನಗೊಂಡ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಾಗಿದೆ. ವಿಚಾರಣೆ ವೇಳೆ ಸಹಚರರು ಕಿಂಗ್‌ಪಿನ್ ಪ್ರಶಾಂತ್ ಹೆಸರನ್ನು ಬಾಯಿಬಿಟ್ಟಿದ್ದು, ಅಧಿಕಾರಿಗಳು ತಕ್ಷಣವೇ ಆತನನ್ನೂ ವಶಕ್ಕೆ ಪಡೆದಿದ್ದಾರೆ. ಈ ಮಹತ್ವದ ಸಂಗತಿಯನ್ನು ಪ್ರಶಾಂತ್ ಪತ್ನಿ ಪೊಲೀಸರ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಬಿಡದಿ ಬಳಿ ಬೃಹತ್ ನಕಲಿ ಔಷಧಿ ದಂಧೆ ಬಯಲು: ಐಸಿಯು, ಕ್ಯಾನ್ಸರ್ ಮಾತ್ರೆಗಳಿಗೂ MNC ಲೇಬಲ್- ಯಾವ ಔಷಧಿಗಳು ನಕಲು?
ಕೆಲ ದಿನಗಳ ಹಿಂದೆ ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ.ತಾಂಡ್ಯಾದಲ್ಲಿದ್ದ ಫಾರ್ಮ್‌ಹೌಸ್ ಮೇಲೆ ತಾವರೆಕೆರೆ ಠಾಣೆ ಪೊಲೀಸರು ದಾಳಿ ನಡೆಸಿದಾಗ ಅಕ್ರಮ ಔಷಧ ಮರುಪ್ಯಾಕಿಂಗ್ ಘಟಕ ಬಯಲಿಗೆ ಬಂದಿತ್ತು. ಚೆನ್ನೈ, ಹರ್ಯಾಣ, ಚಂಡೀಗಢ ಹಾಗೂ ವಿದೇಶಗಳಿಂದ ಕಡಿಮೆ ಬೆಲೆಗೆ ತರುತ್ತಿದ್ದ ಔಷಧಗಳಿಗೆ ಇಲ್ಲಿ ಪ್ರತಿಷ್ಠಿತ ಕಂಪನಿಗಳ ನಕಲಿ ಲೇಬಲ್ ಹಾಗೂ ದುಬಾರಿ ಬೆಲೆಯ ದರಪಟ್ಟಿ ಅಂಟಿಸಿ, ಮಾರುಕಟ್ಟೆಯಲ್ಲಿ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಪೊಲೀಸರು ಈ ಅಡ್ಡೆಯ ಮೇಲೆ ದಾಳಿ ನಡೆಸುವ ಮುನ್ನವೇ ಆಗಸ್ಟ್ 8 ರಂದೇ ಪ್ರಶಾಂತ್ ವಿದೇಶಕ್ಕೆ ಹಾರಿದ್ದ. Exclusive: ನಕಲಿ ಔಷಧಿ ಜಾಲ 5 ರಾಜ್ಯಗಳಿಗೆ ಲಿಂಕ್
ಪ್ರಶಾಂತ್ ವಶದಲ್ಲಿರುವ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಆತನನ್ನು ಭಾರತಕ್ಕೆ ಕರೆತರಲು ವಿಶೇಷ ತನಿಖಾ ತಂಡ (SIT) ಇಂಟರ್‌ಪೋಲ್ ಮೂಲಕ ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಿದೆ.

