ದಾವಣಗೆರೆ: ಹರಿಹರ ಪೀಠದ ವಚನಾನಂದ ಸ್ವಾಮೀಜಿಗೆ (Vachanananda Swamiji) ಪೋಕ್ಸೋ ಪ್ರಕರಣದಲ್ಲಿ ( POCSO case) ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಠದಲ್ಲಿದ್ದ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಾಗಿದ್ದು, ಬಳಿಕ ತನಿಖೆಗಾಗಿ ಪ್ರಕರಣವನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಇದನ್ನೂ ಓದಿ: ಬಾಲಕರನ್ನೂ ಬಿಟ್ಟಿಲ್ಲವೇ? ಬಾಲಕರೂ ಈಗ ಸುರಕ್ಷಿತರಲ್ಲ – ವಚನಾನಂದ ಶ್ರೀ ಜಾಮೀನು ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಗರಂ
ಪ್ರಕರಣ ದಾಖಲಾಗುವ ಮುನ್ನವೇ ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ, ಆ ಜಾಮೀನನ್ನು ರದ್ದುಪಡಿಸುವಂತೆ ಸಂತ್ರಸ್ತ ಬಾಲಕನ ತಾಯಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಜೂ.25 ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಚನಾನಂದ ಸ್ವಾಮೀಜಿಯ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿತ್ತು. ಅಲ್ಲದೇ ರೆಗ್ಯುಲರ್ ಜಾಮೀನು ಪಡೆಯಲು ಮೂರು ವಾರಗಳ ಕಾಲಾವಕಾಶ ನೀಡಿತ್ತು. ಅದರಂತೆ ಇದೀಗ ವಚನಾನಂದ ಸ್ವಾಮೀಜಿ ದಾವಣಗೆರೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಜೂ.27 ರಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಸ್ವಾಮೀಜಿಗೆ ಜಾಮೀನು ಮಂಜೂರಾದ ಹಿನ್ನಲೆ, ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಪೋಕ್ಸೊ ಕೇಸ್| ವಚನಾನಂದ ಸ್ವಾಮೀಜಿ ವಿರುದ್ಧ 410 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
