ಬೆಂಗಳೂರು: ವಚನಾನಂದ ಶ್ರೀಗಳ (Vachanananda Sri) ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ (High Court) ತೀವ್ರ ಅಸಮಾಧಾನ ಹೊರಹಾಕಿದೆ. ಬಾಲಕರನ್ನೂ ಬಿಟ್ಟಿಲ್ಲವೇ? ಬಾಲಕರೂ ಈಗ ಸುರಕ್ಷಿತರಲ್ಲ ಎಂದು ನ್ಯಾಯಾಲಯ ಖಾರವಾಗಿ ನುಡಿದಿದೆ.
ಈ ರೀತಿಯ ನಿರೀಕ್ಷಣಾ ಜಾಮೀನು ಕೊಡುವುದು ಸರಿಯಲ್ಲ. ರೆಗ್ಯುಲರ್ ಜಾಮೀನು ಅರ್ಜಿ ಸಲ್ಲಿಸುವುದು ಸೂಕ್ತವೆಂದು ನ್ಯಾಯಾಲಯ ಸೂಚಿಸಿದೆ. ಅರ್ಜಿಯ ವಿಚಾರಣೆಯನ್ನು ಜೂ.25ಕ್ಕೆ ಮುಂದೂಡಲಾಗಿದೆ. ಇದನ್ನೂ ಓದಿ: ಪೋಕ್ಸೊ ಕೇಸ್| ವಚನಾನಂದ ಸ್ವಾಮೀಜಿ ವಿರುದ್ಧ 410 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಹೈಕೋರ್ಟ್‌ಗೆ ಬಾಲಕನ ತಾಯಿ ಅರ್ಜಿ ಸಲ್ಲಿಸಿದ್ದರು. ವಾದ ಮಂಡನೆಗೆ ಕಾಲಾವಕಾಶ ಕೋರಿದ ವಚನಾನಂದ ಶ್ರೀಗಳ ಪರ ವಕೀಲ, ಟ್ರಸ್ಟ್‌ನವರಿಗೂ ಸ್ವಾಮೀಜಿಗೂ ವಿವಾದಗಳಿದ್ದವು. ಪ್ರೆಸ್ ಮೀಟ್‌ನಲ್ಲಿ ಪೋಕ್ಸೋ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ನಿರೀಕ್ಷಣಾ ಜಾಮೀನು ಪಡೆಯಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈಗಾಗಲೇ ವಚನಾನಂದ ಸ್ವಾಮೀಜಿ ಜಾಮೀನು ಪಡೆದ ರೀತಿಗೆ ಸ್ವತಃ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಮೇ 7ರಂದು ಸ್ವಾಮೀಜಿ ವಿರುದ್ಧ ಪೋಕ್ಸೋ ದೂರು ದಾಖಲಾದರೆ, ಶ್ರೀಗಳು ಅದರ ಹಿಂದಿನ ದಿನ ಅಂದರೆ ಮೇ 6ರಂದೇ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ದೂರು ದಾಖಲು ಮುನ್ನವೇ ಜಾಮೀನು ಕೊಟ್ಟ ರೀತಿ ಆಘಾತಕಾರಿ ಎಂದಿದ್ದ ಹೈಕೋರ್ಟ್, ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದಿತ್ತು. ಈ ಸಂಬಂಧ ಶ್ರೀಗಳಿಗೆ ನೋಟಿಸ್ ಜಾರಿ ಮಾಡಿತ್ತು.
ಹೈಕೋರ್ಟ್ ಆದೇಶ ನೋಡಿಕೊಂಡು, ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯವು ಇದೇ ಜೂ.30ರಂದು ಶ್ರೀಗಳ ಜಾಮೀನು ರದ್ದತಿ ಅರ್ಜಿ ಬಗ್ಗೆ ತನ್ನ ನಿರ್ಧಾರ ಪ್ರಕಟಿಸಲಿದೆ. ಇದನ್ನೂ ಓದಿ: ವಚನಾನಂದ ಶ್ರೀ ಜಾಮೀನು ರದ್ದತಿ ಅರ್ಜಿ ಅದೇಶ ಜೂನ್ 30ಕ್ಕೆ ಮುಂದೂಡಿಕೆ
