ಖುಷಿ ಕೊಟ್ಟ 2025 ಅಷ್ಟೇ ಕಳೆದು.. ದುಃಖವನ್ನು ಕೊಟ್ಟು ಹೋಗಿದೆ. ಹಲವರನ್ನು ತನ್ನ ಅಂತ್ಯದೊಳಗೆ ಅಂತ್ಯಗೊಳಿಸಿ ಅಪಾರ ಅಭಿಮಾನಿಗಳಿಗೆ, ಕುಟುಂಬಕ್ಕೆ ನೋವು ನೀಡಿ ಮುಂದಿನ ಹೆಜ್ಜೆ ಇಟ್ಟಿದೆ. ರಾಜಕೀಯ ಮತ್ತು ಚಲನಚಿತ್ರ ವಲಯದಲ್ಲಿ ಹಲವರು ಅಗಲಿದ್ದಾರೆ. 2025ರಲ್ಲಿ ತನ್ನ ಜೊತೆಗೆ ಕರೆದುಕೊಂಡು ಹೋದ ಪ್ರಮುಖರ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ರಾಜಕೀಯ ಕ್ಷೇತ್ರ – ಹೆಚ್.ವೈ ಮೇಟಿ
ಮಾಜಿ ಸಚಿವ, ಬಾಗಲಕೋಟೆ ಕ್ಷೇತ್ರದ ಹಾಲಿ ಶಾಸಕ ಹೆಚ್.ವೈ ಮೇಟಿ ನವೆಂಬರ್ 4ರಂದು ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದ ಕಾರಣ ಕೆಲ ದಿನಗಳಿಂದ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಈ ಹಿಂದೆ 2013 ರಿಂದ 2016 ರವರೆಗಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಮಂತ್ರಿಯಾಗಿದ್ದರು. ಆ ವೇಳೆ ಲೈಂಗಿಕ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಶಾಮನೂರು ಶಿವಶಂಕಪ್ಪ
ಡಿ.15 ರಂದು ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕಪ್ಪ ಅವರು 95ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜೂನ್ 16, 1930 ರಂದು ದಾವಣಗೆರೆಯಲ್ಲಿ ಜನಿಸಿದ ಇವರು, ಸಾಮಾನ್ಯ ಕುಟುಂಬದಿಂದ ಬಂದು ರಾಜಕೀಯ, ಶಿಕ್ಷಣ, ಉದ್ಯಮ ಮತ್ತು ಸಮಾಜಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಅಗಲಿದ ಸ್ಯಾಂಡಲ್‌ವುಡ್ ನಟರು
ಎಂ.ಎಸ್.ಉಮೇಶ್
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ಹಿರಿಯ ನಟ ಎಂ.ಎಸ್.ಉಮೇಶ್ ಅವರು ನ.30ರಂದು ವಿಧಿವಶರಾದರು. ಅನಾರೋಗ್ಯದಿಂದಾಗಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೈಸೂರಿನಲ್ಲಿ ಏಪ್ರಿಲ್ 22, 1945ರಲ್ಲಿ ಅವರು ಜನಿಸಿದ್ದರು. ರಂಗಭೂಮಿ ಮತ್ತು ಚಲನಚಿತ್ರ ನಟರಾಗಿ 1948ರಿಂದಲೂ ಸಕ್ರಿಯರಾಗಿದ್ದರು.
ಸಂತೋಷ್ ಬಾಲರಾಜ್
ಸ್ಯಾಂಡಲ್‌ವುಡ್‌ನ (Sandalwood) ಯುವ ನಟನ ಸಂತೋಷ್ ಬಾಲರಾಜ್ ಅಗಸ್ಟ್ 5ರಂದು ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ ಜಾಂಡೀಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮತ್ತೆ ಸಂತೋಷ್ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿದ್ದರು. ಕರಿಯಾ-2, ಕೆಂಪ, ಗಣಪ, ಬರ್ಕ್ಲಿ ಹಾಗೂ ಸತ್ಯ ಸಿನಿಮಾಗಳಲ್ಲಿ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿದ್ದರು.
ಯಶವಂತ್ ಸರದೇಶಪಾಂಡೆ
ನಟ, ರಂಗ ನಿರ್ದೇಶಕ ಯಶವಂತ್ ಸರದೇಶಪಾಂಡೆ (55) (Yashwant Sardeshpande) ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ 23 ಸೆಪ್ಟೆಂಬರ್‌ರಂದು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಯಶವಂತ ಸರದೇಶಪಾಂಡೆ ಕನ್ನಡ ರಂಗಭೂಮಿ (Kannada theatre) ನಟರಾಗಿ ಹೆಚ್ಚು ಜನಪ್ರಿಯವಾದವರು. ಇವರು ನಟಿಸಿ-ನಿರ್ದೇಶಿಸಿರುವ ʻಆಲ್ ದಿ ಬೆಸ್ಟ್ʼ ನಾಟಕ ರಾಜ್ಯಾದಂತ್ಯ ಅಭೂತಪೂರ್ವ ಯಶಸ್ಸು ಕಂಡಿತ್ತು. ಇವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯ ಕಲಾವಿದೆಯಾಗಿದ್ದಾರೆ.
ಹರೀಶ್ ರಾಯ್
ಕನ್ನಡ ಸಿನಿಮಾ ನಟ ಹರೀಶ್ ರಾಯ್ ನ.6 ರಂದು ಮೃತಪಟ್ಟಿದ್ದರು. ಅವರು ಕಳೆದ ಕೆಲ ವರ್ಷಗಳಿಂದ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಥೈರಾಯ್ಡ್ ಕ್ಯಾನ್ಸರ್‌ನಿಂದ ಹರೀಶ್ ರಾಯ್ ಅವರು ಗುರುತೇ ಸಿಗದಂತೆ ಆಗಿದ್ದರು. ಹೀಗಾಗಿ ನಟ ಯಶ್, ದರ್ಶನ್, ಧ್ರುವ ಸರ್ಜಾ ಸೇರಿದಂತೆ ಇನ್ನೂ ಹಲವರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ಕನ್ನಡದಲ್ಲಿ ‘ಓಂ’, ‘ನಲ್ಲ’ ‘ಕೆಜಿಎಫ್’, ‘ಕೆಜಿಎಫ್ 2’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದರು.
ನಿಜು ಕಲಾಭವನ
ನಿಜು ಕಲಾಭವನ (43) (Kalabhavan Niju) ಒಬ್ಬ ಜನಪ್ರಿಯ ಮಲಯಾಳಂ ನಟ ಮತ್ತು ಮಿಮಿಕ್ರಿ ಕಲಾವಿದರಾಗಿದ್ದು, ರಿಷಬ್ ಶೆಟ್ಟಿಯವರ ‘ಕಾಂತಾರ ಚಾಪ್ಟರ್ 1’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ 2025ರ ಜೂನ್ 12 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ‘ಮಲಿಕಪ್ಪುರಂ’ ಮತ್ತು ‘ಮಾರ್ಕೊ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು ಮತ್ತು 25 ವರ್ಷಗಳ ಮಿಮಿಕ್ರಿ ಅನುಭವ ಹೊಂದಿದ್ದರು.
ರಾಜು ತಾಳಿಕೋಟಿ
ಧಾರವಾಡ ರಂಗಾಯಣ ನಿರ್ದೇಶಕ, ಖ್ಯಾತ ಹಿರಿಯ ರಂಗಭೂಮಿ ಕಲಾವಿದ, ಹಾಸ್ಯನಟ ರಾಜು ತಾಳಿಕೋಟಿ (Actor Raju Talikote) ಅವರು ಅ.13 ರಂದು ಹೃದಯಾಘಾತದಿಂದ ನಿಧನರಾದರು.
ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಶೂಟಿಂಗ್ ಸಲುವಾಗಿ ರಾಜು ತಾಳಿಕೋಟಿ ಅವರು ಉಡುಪಿಗೆ ಬಂದಿದ್ದರು. ಚಿತ್ರೀಕರಣ ಮುಗಿಸಿ ರಾತ್ರಿ ವಿಶ್ರಾಂತಿ ಪಡೆಯುತ್ತಿರುವಾಗ ಹೃದಯಾಘಾತ ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಅವರು ಬದುಕುಳಿಯಲಿಲ್ಲ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದದವರು. ರಾಜು ತಾಳಿಕೋಟಿಯವರು ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ. ಅವರು ಕೇವಲ ನಟನಾಗಿರದೇ ತಾಳಿಕೋಟೆಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿದ್ದರು. ಇವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮುಖ್ಯವಾಗಿ ಕುಡುಕರ ಜೀವನದ ಆಟೋಟೋಪಗಳನ್ನು ಹಾಸ್ಯವಾಗಿ ಚಿತ್ರಸಿದ `ಕಲಿಯುಗದ ಕುಡುಕ’ ನಾಟಕ ಮುಖಾಂತರ ತುಂಬಾ ಪ್ರಸಿದ್ಧಿ ಪಡೆದಿದ್ದರು.
ಎ ಟಿ ರಘು
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎ ಟಿ ರಘು ಮಾರ್ಚ್ 20 ರಂದು ವಿಧಿವಶವಾದರು. ಕನ್ನಡ ಚಿತ್ರರಂಗಕ್ಕೆ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ‘ಮಂಡ್ಯದ ಗಂಡು’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಅವರು ಅಂಬಿ ಜೊತೆಗೆ ಅತೀ ಹೆಚ್ಚು ಚಿತ್ರಗಳನ್ನು ಮಾಡಿದ್ದರು.
ದೀರ್ಘಕಾಲದಿಂದ ತೀವ್ರ ಅನಾರೋಗ್ಯದಿಂದ ಎ ಟಿ ರಘು ಬಳಲುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಎ ಟಿ ರಘು ನಿರಂತರವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಆವರಿಗೆ 76 ವರ್ಷ ವಯಸ್ಸಾಗಿತ್ತು.
ಬಾಲಿವುಡ್‌ನ ಪ್ರಮುಖ ನಟರು
ಧರ್ಮೇಂದ್ರ
ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ, ಎವರ್‌ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಧರ್ಮೇಂದ್ರ (Actor Dharmendra) ಅವರು ಡಿ.8 ರಂದು 89ನೇ ವಯಸ್ಸಿನಲ್ಲಿ ವಿಧಿವಶರಾದರ.
ಬಾಲಿವುಡ್ ಆಳಿದ ದಿಗ್ಗಜ
ಹಲವು ವರ್ಷಗಳ ಕಾಲ ಬಾಲಿವುಡ್ ಚಿತ್ರರಂಗವನ್ನ ಆಳಿದ ಧರ್ಮೇಂದ್ರ 1935ರ ಡಿಸೆಂಬರ್ 8ರಂದು ಪಂಜಾಬ್‌ನ ಲುಧಿಯಾನದ ಸಣ್ಣ ಹಳ್ಳಿಯಲ್ಲಿ ಜನಿಸಿದ್ರು. ಕಿರಿಯ ವಯಸ್ಸಿನಲ್ಲೇ ಪ್ರಕಾಶ್ ಕೌರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚಿಕ್ಕ ವಯಸ್ಸಿನಿಂದಲೇ ಸಿನಿಮಾ ರಂಗದಲ್ಲಿ ಮಿಂಚಬೇಕು, ನಟನಾಗಬೇಕು ಎಂಬ ಹಂಬಲ ಹೊಂದಿದ್ದ ಧರ್ಮೇಂದ್ರ ನಟಿಸುವುದಕ್ಕಾಗಿಯೇ ಮನೆ ಬಿಟ್ಟು ಬಂದರು. 1960ರಲ್ಲಿ ʻದಿಲ್ ಬಿ ತೇರಾ ಹಮ್ ಬಿ ತೇರೆʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರಲ್ಲದೇ ʻಶೋಲೆʼ ಸಿನಿಮಾ ಮೂಲಕ ಕರ್ನಾಟಕದೊಂದಿಗೆ ನಂಟು ಹೊಂದಿದ್ದರು. ಇವರ ಕಲಾ ಸೇವೆಗೆ 2012ರಲ್ಲಿ ಪದ್ಮ ಭೂಷಣ ಪ್ರಶಸ್ತಿಯೂ ಒಲಿದುಬಂದಿತು.
ಮನೋಜ್ ಕುಮಾರ್
ಮನೋಜ್ ಕುಮಾರ್ ಭಾರತದ ಮಹಾನ್ ನಟ. ಇವರು ಏ.4ರಂದು ಇಹಲೋಕ ತ್ಯೆಜಿಸಿದರು. ಇವರು ಭಾರತ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿ ಗೆದ್ದಿದ್ದರು. ಈ ಪ್ರಕರಣವು ಅವರನ್ನು ಒಬ್ಬ ಮಹಾನ್ ನಟ ಮಾತ್ರವಲ್ಲದೆ, ಧೈರ್ಯಶಾಲಿ ಎಂಬುದನ್ನು ಸಾಬೀತುಪಡಿಸಿತ್ತು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಈ ಘಟನೆ ಸಂಭವಿಸಿದೆ. 1975 ರಲ್ಲಿ ಇಂದಿರಾ ಗಾಂಧಿ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಮನೋಜ್ ಕುಮಾರ್ ಅದನ್ನು ವಿರೋಧಿಸಿದರು. ಇದರಿಂದ ಕೋಪಗೊಂಡ ಸರ್ಕಾರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದ ಮನೋಜ್ ಕುಮಾರ್ ಸೇರಿದಂತೆ ಎಲ್ಲಾ ನಟರ ಚಲನಚಿತ್ರಗಳ ಬಿಡುಗಡೆಯನ್ನು ನಿಷೇಧಿಸಿತು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮನೋಜ್ ಕುಮಾರ್ ಅವರ ಚಿತ್ರ ನಂ. 10 ಅನ್ನು ನಿಷೇಧಿಸಿತು. ಅಲ್ಲದೆ, ಅವರ ಎರಡನೇ ಚಿತ್ರ ಶೋರ್‌ನಲ್ಲೂ ಇದೇ ರೀತಿ ಆಯಿತು. ಸರ್ಕಾರವು ‘ಶೋರ್’ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೊದಲೇ ದೂರದರ್ಶನದಲ್ಲಿ ಪ್ರದರ್ಶಿಸಿತು, ಇದರಿಂದಾಗಿ ಜನರು ಚಿತ್ರಮಂದಿರಕ್ಕೂ ಹೋಗಲಿಲ್ಲ ಮತ್ತು ದಿಲೀಪ್ ಕುಮಾರ್ ಅವರಿಗೆ ಭಾರಿ ನಷ್ಟವಾಯಿತು. ಇದರಿಂದ ಕೋಪಗೊಂಡ ನಟ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದ್ದರು.
ಪಂಕಜ್ ಧೀರ್
ಖ್ಯಾತ ಟೆಲಿವಿಷನ್ ನಟ ಪಂಕಜ್ ಧೀರ್ , ಮಹಾಭಾರತ ‘ದಲ್ಲಿ ಕರ್ಣನ ಪಾತ್ರ ಮತ್ತು ‘ಚಂದ್ರಕಾಂತ’ದಲ್ಲಿ ರಾಜ ಶಿವದತ್ತನ ಪಾತ್ರದಿಂದ ಪ್ರಸಿದ್ಧರಾಗಿದ್ದವರು, ಅಕ್ಟೋಬರ್ 15 ರಂದು 68 ನೇ ವಯಸ್ಸಿನಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ನಿಧನರಾದರು. ಅವರ ಅಕಾಲಿಕ ಸಾವು ಮನರಂಜನಾ ಕ್ಷೇತ್ರಕ್ಕೆ ದೊಡ್ಡ ಆಘಾತ ನೀಡಿದೆ.
ಸುಲಕ್ಷಣಾ ಪಂಡಿತ್
ನವೆಂಬರ್ 6, 2025 ರಂದು 71ನೇ ವಯಸ್ಸಿನಲ್ಲಿ ಖ್ಯಾತ ಗಾಯಕಿ ಮತ್ತು ನಟಿ ಸುಲಕ್ಷಣಾ ಪಂಡಿತ್ ಅವರು ನಿಧನರಾದರು. ಅವರ ಅಕಾಲಿಕ ನಿಧನವು ಸಂಗೀತ ಮತ್ತು ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ. ತಮ್ಮ ಅದ್ಭುತ ಕಂಠಸಿರಿ ಮತ್ತು ಅಭಿನಯದಿಂದ ಹಿಂದಿ ಚಿತ್ರರಂಗದಲ್ಲಿ ಅಳಿಯದ ಛಾಪು ಮೂಡಿಸಿದ್ದ ಸುಲಕ್ಷಣಾ, ಅಭಿಮಾನಿಗಳ ಮನದಲ್ಲಿ ಸದಾ ನೆಲೆಸಿದ್ದಾರೆ.
ಶೆಫಾಲಿ ಜರಿವಾಲಾ
ಹಿಂದಿ ಬಿಗ್ ಬಾಸ್ 13ರ (Hindi Bigg Boss 13) ಸ್ಪರ್ಧಿಯಾಗಿದ್ದ ನಟಿ ಶೆಫಾಲಿ ಜರಿವಾಲಾ (Shefali Jariwala) ಹೃದಯಾಘಾತದಿಂದ (Heart Attack) ಜೂ.28ರಂದು ನಿಧನರಾದರು. 42 ವರ್ಷದ ಶೆಫಾಲಿ ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿ ವಾಸಿಸುತ್ತಿದ್ದರು. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಶೆಫಾಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಶೆಫಾಲಿ ಕೊನೆಯುಸಿರೆಳೆದಿದ್ದರು.
1982ರ ಡಿಸೆಂಬರ್ 15ರಂದು ಜನಿಸಿದ ಶೆಫಾಲಿ ಮುಂಬೈನಲ್ಲಿ ಬೆಳೆದರು. 2004ರಲ್ಲಿ ಹರ್ಮೀತ್ ಸಿಂಗ್ ಜೊತೆ ಶೆಫಾಲಿ ವಿವಾಹವಾದರು. ಆ ಬಳಿಕ ಪತಿಯೊಂದಿಗೆ ವಿಚ್ಛೇದನ ಪಡೆದು 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಕಾಂತಾ ಲಗಾ ಹಾಡಿನ ಮೂಲಕ ನಟಿ ಫೇಮಸ್ ಆಗಿದ್ದರು.
ಜುಬೀನ್ ಗಾರ್ಗ್
ಅಸ್ಸಾಂನ ಜನಪ್ರಿಯ ಗಾಯಕ ಜುಬೀನ್ ಗಾರ್ಗ್, ಸೆಪ್ಟೆಂಬರ್ 19ರಂದು ನಿಧನರಾದರು. ಸಿಂಗಾಪುರದಲ್ಲಿ ನಡೆದ ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ತೆರಳಿದ್ದ ಜುಬೀನ್ ಗಾರ್ಗ್, ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದರು. ಆದರೆ, ಇದು ಕೇವಲ ಆಕಸ್ಮಿಕ ಅವಘಡವಲ್ಲ, ಇದರ ಹಿಂದೆ ಸಂಚು ಅಡಗಿದೆ ಎಂಬ ಆರೋಪಗಳು ಕೇಳಿಬಂದ ತಕ್ಷಣ, ಅಸ್ಸಾಂ ಸರ್ಕಾರವು ವಿಶೇಷ ಡಿಜಿಪಿ ಎಂ.ಪಿ. ಗುಪ್ತಾ ನೇತೃತ್ವದಲ್ಲಿ 10 ಸದಸ್ಯರ ಎಸ್‌ಐಟಿ ರಚಿಸಿತ್ತು. ಹಲವರನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ.
ಪ್ರಸಿದ್ಧ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ (Zubeen Garg) ಅವರ ಅಂತಿಮ ಯಾತ್ರೆ ಸೆ.21ರಂದು ಗುವಾಹಟಿಯಲ್ಲಿ ನಡೆಯಿತು. ಈ ವೇಳೆ ಲಕ್ಷಾಂತರ ಜನರು ಭಾಗಿಯಾಗಿದ್ದರು. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಜನರು ಸೇರಿದ 4ನೇ ಅಂತಿಮ ಯಾತ್ರೆ ಎಂದು ದಾಖಲೆ ನಿರ್ಮಿಸಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ( Limca Book of Records) ಸೇರ್ಪಡೆಯಾಗಿದೆ.
ಶ್ರೀನಿವಾಸನ್
ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀನಿವಾಸನ್ ಡಿ.20ರಂದು ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು, ಚಿಕಿತ್ಸೆ ಪಡೆಯುತ್ತಿದ್ದರು.
1977ರಲ್ಲಿ ಪಿ.ಎ ಬ್ಯಾಕರ್ ಅವರ ‘ಮಣಿಮುಳಕ್ಕಂ’ ಚಿತ್ರದ ಮೂಲಕ ಶ್ರೀನಿವಾಸನ್ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಮಲಯಾಳಂ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಟರಲ್ಲಿ ಒಬ್ಬರಾದರು. ಸುಮಾರು ಐದು ದಶಕಗಳಲ್ಲಿ, ಅವರು 225ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತೀಕ್ಷ್ಣವಾದ ಸಾಮಾಜಿಕ ವಿಡಂಬನೆ ಮತ್ತು ಸ್ಮರಣೀಯ ಅಭಿನಯಕ್ಕಾಗಿ ಮೆಚ್ಚುಗೆ ಗಳಿಸಿದ್ದಾರೆ.
















