ರಾಮನಗರ: ಹಿಂದೂಗಳನ್ನು ಒಂದು ಮಾಡಲು ಹೊರಟರೆ ಬಿಜೆಪಿ ಪಾಲಿಗೆ ದಕ್ಷಿಣ ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಚುನಾವಣಾ ಪೂರ್ವ ಸಿದ್ಧತೆಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಿಗೋಸ್ಕರ ತಲ್ವಾರ್ ತೋರಿಸುತ್ತಿದ್ದೀರಿ? ಕರ್ನಾಟಕವನ್ನು ಮತ್ತೊಂದು ಗುಜರಾತ್ ಮಾಡಲು ಹೊರಟಿದ್ದೀರಾ? ಕರ್ನಾಟಕದಲ್ಲಿ ಮತ್ತೊಂದು ಗೋಧ್ರಾ ಹತ್ಯಾಕಾಂಡಕ್ಕೆ ಯತ್ನಿಸುತ್ತಿದ್ದೀರಾ? ಹತ್ಯಾಕಾಂಡ ನಡೆಸಲು ಇದು ಉತ್ತರಪ್ರದೇಶ ಅಥವಾ ಗುಜರಾತ್ ಅಲ್ಲ. ರಾಜ್ಯ ಸರ್ಕಾರ ಇಂತಹ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಅದಕ್ಕಾಗಿ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ್ದೇನೆ. ಅಷ್ಟರಲ್ಲಿ ಇಂತಹ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಮಾತನಾಡಲ್ಲ, ನನ್ನ ಆಕ್ಷನ್ ಮಾತನಾಡುತ್ತದೆ: ವಿಪಕ್ಷಗಳಿಗೆ ಬೊಮ್ಮಾಯಿ ತಿರುಗೇಟು
Advertisement
Advertisement
ಬಿಜೆಪಿ ಹಾಗೂ ಅಂಗಪಕ್ಷಗಳು ಇದೇ ರೀತಿ ರಾಜ್ಯದಲ್ಲಿ ಹಿಂದೂಗಳನ್ನು ಒಂದು ಮಾಡುತ್ತೇವೆ ಎಂದು ಹೋಗುತ್ತಿದ್ದರೆ, ಕರ್ನಾಟಕದ ಜನತೆಯಿಂದಲೇ ಕರ್ನಾಟಕದ ಹೆಬ್ಬಾಗಿಲು ಆಗಿರುವ ದಕ್ಷಿಣ ಕರ್ನಾಟಕ ಭಾಗ ಬಿಜೆಪಿ ಪಾಲಿಗೆ ಸಂಪೂರ್ಣ ಬಂದ್ ಆಗುತ್ತದೆ ಎಂದು ಹೇಳಿದ್ದಾರೆ.
Advertisement
ಕಲ್ಲಂಗಡಿ ಒಡೆದಿದ್ದಕ್ಕೆ ಕನಿಕರ ತೋರುವವರು ಸುಮ್ಮನಿದ್ದರು. ತಲೆ ಒಡೆದಾಗ ಕನಿಕರ ತೋರಲಿಲ್ಲವೆಂಬ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ ಹೆಚ್‌ಡಿಕೆ, ನೀವು ತಲೆ ಒಡೆಯುವ ಕೆಲಸ ಮಾಡುತ್ತೀರಿ. ರಾಜ್ಯದ ಶಾಂತಿ ಸುವ್ಯವಸ್ಥೆ ಹಾಳುಮಾಡುತ್ತೀರಿ. ನಿಮ್ಮಂಥವರ ಪ್ರಚೋದನಕಾರಿ ಹೇಳಿಕೆಯಿಂದ ಹೀಗಾಗುತ್ತಿದೆ. ಇಷ್ಟು ಅರ್ಥಮಾಡಿಕೊಳ್ಳದಿದ್ದರೆ ಯಾವ ದೇಶ ಕಟ್ಟುತ್ತೀರಿ ನೀವು? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬೆಳಗಾವಿ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಮುಂದಾದ ಅರುಣ್ ಸಿಂಗ್, ಬಿಎಸ್‍ವೈ
Advertisement
94 ನದಿಗಳ ನೀರು ಸಂಗ್ರಹಿಸಿ ಪೂಜೆ
2023ರ ಚುನಾವಣಾ ಪೂರ್ವ ಸಿದ್ಧತೆ ಪ್ರಾರಂಭಿಸಲು ಕರ್ನಾಟಕ ರಾಜ್ಯದ 94 ನದಿಗಳು, ಉಪ ನದಿಗಳಿಂದ ನೀರು ಸಂಗ್ರಹಿಸಿ ಪೂಜೆ ಸಲ್ಲಿಸಲು ನಿರ್ಧರಿಸಲಾಗಿದೆ. ನಾಳೆ ಬೆಳಿಗ್ಗೆ 10:30ಕ್ಕೆ ರಾಮನಗರದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಜರುಗಲಿದೆ. 15 ವಾಹನಗಳಲ್ಲಿ ಜನತಾ ಜಲಧಾರೆಯ ಕಳಶ ಸ್ಥಾಪಿಸಲಾಗಿದೆ. ರಾಮನಗರದಲ್ಲಿ ಪೂಜೆ ನೆರವೇರಿದ ನಂತರ ನದಿ ನೀರು ಸಂಗ್ರಹಿಸಲು ವಾಹನಗಳು ತೆರಳಲಿವೆ. ನಾಳೆ 15 ಕ್ಷೇತ್ರಗಳಲ್ಲಿ ನದಿ ನೀರು ಸಂಗ್ರಹಿಸುವ ಗುರಿ ಹೊಂದಿದ್ದು, ಉಳಿದಂತೆ 94, ನದಿ, ಉಪನದಿಗಳಲ್ಲಿ ನೀರು ಸಂಗ್ರಹಿಸಿ, ಏಪ್ರಿಲ್ 4ರಂದು ಬೆಂಗಳೂರು ತಲುಪಲಿವೆ. ದೂರದ ಸ್ಥಳಗಳಿಗೆ ತೆರಳಿದ ವಾಹನಗಳು ಏಪ್ರಿಲ್ 8ರಂದು ಬೆಂಗಳೂರು ಸೇರಲಿವೆ ಎಂದು ಹೇಳಿದರು. ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ
ರಾಜ್ಯದ ನೀರಾವರಿ ಯೋಜನೆ ಜಾರಿಗೆ ಬಿಜೆಪಿ ಪ್ರಯತ್ನಿಸಿಲ್ಲ. ನೀರಾವರಿ ಯೋಜನೆ ಜಾರಿಗೆ ಬಿಜೆಪಿ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಧಾರ್ಮಿಕ ಅಂಶಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸುತ್ತಿದೆ. ಮೇಕೆದಾಟು, ಮಹದಾಯಿ, ಕೃಷ್ಣಾ, ಭದ್ರಾ ಮೇಲ್ದಂಡೆ ಯೋಜನೆ, ನೀರಾವರಿ ಯೋಜನೆ ಪೂರ್ಣಗೊಳಿಸಲು 5 ಲಕ್ಷ ಕೋಟಿ ಬೇಕು. ಜೆಡಿಎಸ್‌ಗೆ ಪೂರ್ಣಪ್ರಮಾಣದ ಅಧಿಕಾರ ನೀಡಿದರೆ ಯೋಜನೆ ಜಾರಿ ಮಾಡುತ್ತೇವೆ. ರಾಜ್ಯದ ನೀರಾವರಿ ಯೋಜನೆ ಜಾರಿಮಾಡದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಪುನರುಚ್ಛರಿಸಿದ್ದಾರೆ.