ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು ದಾದಾ ರಾಜಕೀಯ ಇನ್ನಿಂಗ್ಸ್ ಆಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
2021ರ ಪಶ್ಚಿಮ ಬಂಗಾಳ ಚುನಾವಣೆಯ ಸಮಯದಲ್ಲಿ ಸೌರವ್ ಗಂಗೂಲಿ ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಚುನಾವಣೆ ಮುಗಿದ ಮೇಲೆ ಈ ವಿಚಾರ ಹೆಚ್ಚು ಚರ್ಚೆ ಆಗಿರಲಿಲ್ಲ. ಆದರೆ ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
Advertisement
ಕಳೆದ ಶುಕ್ರವಾರ ಪ್ರಧಾನಿ ಮೋದಿ ಕಾಮನ್‌ವೆಲ್ತ್ ಪದಕ ವಿಜೇತರನ್ನು ದೆಹಲಿಯಲ್ಲಿ ಅಭಿನಂದಿಸಿದ್ದರು. ಈ ಕಾರ್ಯಕ್ರಮದಲ್ಲಿ ಸೌರವ್ ಗಂಗೂಲಿ ಸಹ ಭಾಗಿಯಾಗಿದ್ದರು. ಆದರೆ ಅವರು ರಾಜಕೀಯ ವಿಷಯ ಚರ್ಚಿಸಿಲ್ಲ. ಬದಲಾಗಿ ಐಸಿಸಿ, ಬಿಸಿಸಿಐ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಸೌರವ್ ಗಂಗೂಲಿ ಐಸಿಸಿ ಮುಖ್ಯಸ್ಥ ಹುದ್ದೆಯ ರೇಸ್‌ನಲ್ಲಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಗೂಲಿ ಇಬ್ಬರು ನಾಯಕರ ಜೊತೆ ಮಾತನಾಡಲು ಬಂದಿರಬಹುದು ಎಂದು ವರದಿಯಾಗಿದೆ. ಇದನ್ನೂ ಓದಿ: ಟೆಲಿಪ್ರಾಂಪ್ಟರ್ ಬಳಸದೇ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಮೋದಿ
Advertisement
ಈಗಾಗಲೇ ಸೌರವ್ ಗಂಗೂಲಿ ಅವರ ಆಡಳಿತದ ಅವಧಿ ಅಂತ್ಯವಾಗಿದೆ. ಹೀಗಿದ್ದರೂ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಕಾರ್ಯಾವಧಿಯನ್ನು 3 ವರ್ಷಕ್ಕೆ ವಿಸ್ತರಿಸುವಂತೆ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಖಾಜಾಂಚಿ ಅರುಣ್ ಧುಮಲ್ ಅರ್ಜಿ ಸಲ್ಲಿಸಿದ್ದಾರೆ.
ಸಮಸ್ಯೆ ಏನಾಗಿದೆ?
ಬಿಸಿಸಿಐ ಅಧ್ಯಕ್ಷರಾಗಿದ್ದುಕೊಂಡು ಗಂಗೂಲಿ ಅವರಿಗೆ ಐಸಿಸಿಯ ಮುಖ್ಯಸ್ಥರಾಗಲು ಸಾಧ್ಯವಿಲ್ಲ. ಒಂದು ವೇಳೆ ಬಿಸಿಸಿಐ ಅಧ್ಯಕ್ಷರಾಗದೇ ಇದ್ದಲ್ಲಿ ಗಂಗೂಲಿ ಐಸಿಸಿ ಅಧ್ಯಕ್ಷ ಸ್ಪರ್ಧೆಯಿಂದಲೇ ಹೊರಗುಳಿಯಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿಸಿಐ ಪ್ರಭಾವ ಬಹಳ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಸ್ಪರ್ಧಿಸಿದರೆ ಬಹುತೇಕ ದೇಶಗಳು ಬೆಂಬಲಿಸುವ ಸಾಧ್ಯತೆಯಿದೆ.
ನ್ಯಾ.ಲೋಧಾ ಸಮಿತಿ ಶಿಫಾರಸ್ಸಿನ ಅನ್ವಯ 6 ವರ್ಷದ ಅವಧಿ ಪೂರ್ಣಗೊಂಡ ಬಳಿಕ 3 ವರ್ಷಗಳ ಕೂಲಿಂಗ್ ಆಫ್ ಅವಧಿಗೆ ತೆರಳಬೇಕು. ಆದರೆ ಈ ನಿಯಮಕ್ಕೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ತಿದ್ದುಪಡಿ ತಂದಿದೆ. ಈಗ ಗಂಗೂಲಿ ಮತ್ತು ಜಯ್ ಶಾ ಅವರ ಕೂಲಿಂಗ್ ಆಫ್ ಅವಧಿಯನ್ನು ತೆರವುಗೊಳಿಸಬೇಕು ಎಂದು ಸುಪ್ರೀಂನಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಕೋರಲಾಗಿದೆ.
ನ್ಯಾ.ಲೋಧಾ ಸಮಿತಿ ಶಿಫಾರಸುಗಳ ಪ್ರಕಾರ, ಬಿಸಿಸಿಐ ಪದಾಧಿಕಾರಿಗಳು ಗರಿಷ್ಠ ಆರು ವರ್ಷಗಳ ಹುದ್ದೆಯಲ್ಲಿ ಮುಂದುವರಿಯಬಹುದು. ಈ ಅವಧಿ ಮುಗಿದ ಮೂರು ವರ್ಷದವರೆಗೆ ಬಿಸಿಸಿಐಯ ಯಾವುದೇ ಹುದ್ದೆಯನ್ನು ಅಲಂಕರಿಸುವಂತಿಲ್ಲ. ಮೂರು ವರ್ಷ ಕೂಲಿಂಗ್ ಆಫ್ ಅವಧಿ ಮುಕ್ತಾಯಗೊಂಡ ಬಳಿಕ ಮತ್ತೆ ಸ್ಪರ್ಧಿಸಬಹುದಾಗಿದೆ. ಈ ಹಿಂದೆ ಸೌರವ್ ಗಂಗೂಲಿ ಬಂಗಾಳ ಕ್ರಿಕೆಟ್ ಮತ್ತು ಜಯ್‌ಶಾ ಗುಜರಾತ್ ಕ್ರಿಕೆಟ್ ಬೋರ್ಡ್‌ನಲ್ಲಿದ್ದರು. ಹೀಗಾಗಿ ಈಗ ಗಂಗೂಲಿ ಐಸಿಸಿಯ ಬಾಸ್ ಆಗುತ್ತಾರಾ? ಇಲ್ಲವೋ ಎನ್ನುವುದು ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಮೇಲೆ ನಿಂತಿದೆ.
ಈ ಮೊದಲು ಐಸಿಸಿಯ ಮುಖ್ಯಸ್ಥ ಹುದ್ದೆಗೆ ಏರುವ ಅಭ್ಯರ್ಥಿ 2/3 ಬಹುಮತ ಪಡೆಯಬೇಕೆಂಬ ನಿಯಮ ಇತ್ತು. ಆದರೆ ಈಗ ನಿಮಯ ಬದಲಾಗಿದ್ದು ಶೇ.51 ರಷ್ಟು ಮತ ಪಡೆದ ವ್ಯಕ್ತಿ ಐಸಿಸಿಯ ಮುಖ್ಯಸ್ಥನಾಗಲು ಸಾಧ್ಯವಿದೆ. ಒಟ್ಟು 16 ನಿರ್ದೇಶಕರ ಪೈಕಿ 9 ಮತ ಪಡೆದರೂ ಐಸಿಸಿ ಬಾಸ್ ಸ್ಥಾನವನ್ನು ಅಲಂಕರಿಸಬಹುದಾಗಿದೆ.