ಬಾಗಲಕೋಟೆ: ಹೆತ್ತವರನ್ನು ಸಾಕಲು ಯೋಗ್ಯತೆ ಇರದ ಪಾಪಿ ಮಕ್ಕಳು ತಾಯಿಗೆ ಪ್ರಾಣ ಬೆದರಿಕೆ ಹಾಕಿದ್ದು, ಮಕ್ಕಳ ದುಷ್ಟತನಕ್ಕೆ ಹೆದರಿ ಮನನೊಂದ ತಾಯಿ ಕಣ್ಣೀರಿಡುತ್ತಿದ್ದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ.
ನವನಗರ ನಿವಾಸಿ ಶಾಂತವ್ವ ತಳವಾರ್ ಮಕ್ಕಳಿಂದ ಬೆದರಿಕೆಗೆ ಒಳಗಾಗಿರುವ ನತದೃಷ್ಟ ತಾಯಿ. ನವನಗರದ 28ನೇ ಸೆಕ್ಟರ್ ನಿವಾಸಿಯಾಗಿರುವ ಶಾಂತವ್ವ ಅವರನ್ನು ಹೆತ್ತ ಮಕ್ಕಳು ನೋಡಿಕೊಳ್ಳುತ್ತಿಲ್ಲ. ಶಾಂತವ್ವ ಅವರಿಗೆ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಓರ್ವ ಮಗ ಪರಶುರಾಮ್ ಹೊನ್ನಾವರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಇನ್ನೋರ್ವ ಮಗ ಆಕಾಶ್ ಬಾಗಲಕೋಟೆಯಲ್ಲಿ ಕ್ರೂಸರ್ ಡ್ರೈವರ್ ಆಗಿದ್ದಾನೆ. ದುಡಿಯುವ ಎರಡು ಗಂಡು ಮಕ್ಕಳಿದ್ದರೂ ಯಾರೂ ಕೂಡ ತಾಯಿಯನ್ನ ನೋಡಿಕೊಳ್ಳುತ್ತಿಲ್ಲ. ಹೆತ್ತು, ಹೊತ್ತು, ಸಾಕಿದ ತಾಯಿಯನ್ನೆ ಮಕ್ಕಳು ಬೀದಿಗೆ ಬಿಟ್ಟಿದ್ದಾರೆ.
ಮಕ್ಕಳು ತನಗೆ ಮಾಡುತ್ತಿದ್ದ ಕಿರಿಕಿರಿಯಿಂದ ನೊಂದ ತಾಯಿ ಮನೆ ಬಿಟ್ಟು ಬಂದಿದ್ದಾರೆ. ಜೊತೆಗೆ ಮಕ್ಕಳ ಬೆದರಿಕೆಗೆ ಹೆದರಿ ಕಣ್ಣೀರು ಹಾಕಿದ್ದಾರೆ. ಯಾರಾದರೂ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಬೇಡಿಕೊಂಡಿದ್ದಾರೆ. ವೃದ್ಧ ತಾಯಿಯ ಸಹಾಯಕ್ಕೆ ಬಂದ ಪಬ್ಲಿಕ್ ಟಿವಿ ಪ್ರತಿನಿಧಿ ಮಾನವೀಯತೆ ಮರೆದಿದ್ದಾರೆ. ನೊಂದ ತಾಯಿಗೆ ಸಾಂತ್ವಾನ ಹೇಳಿ, ಹಿರಿಯ ನಾಗರಿಕರ ಸಹಾಯವಾಣಿ ಕಚೇರಿಗೆ ಕರೆದುಕೊಂಡು ಹೋಗಿ ಮಕ್ಕಳ ಬಗ್ಗೆ ದೂರು ದಾಖಲಿಸಿದ್ದಾರೆ. ಜೊತೆಗೆ ಎಸ್.ಪಿ ಕಚೇರಿಗೆ ಕರೆದೊಯ್ದು ಎಸ್.ಪಿ ಲೋಕೇಶ್ ಅವರಿಗೆ ಈ ವಿಷಯ ತಿಳಿಸಿ ತಾಯಿಗೆ ಸಹಾಯ ಮಾಡಿದ್ದಾರೆ.