ಚಿತ್ರದುರ್ಗ: ಊಟ ಬೇಕೆಂದು ಅಳುತ್ತಿದ್ದ ಮಗನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆಂದು ಪತಿ ವಿರುದ್ಧ ಪತ್ನಿ ದೂರು ದಾಖಲಿಸಿರುವ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಹಳೇ ರಂಗಾಪುರ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ (06) ಮೃತ ದುರ್ದೈವಿ ಬಾಲಕ. ಮಂಜುನಾಥ ಊಟ ಬೇಕೆಂದು ಅಳುತ್ತಿದ್ದ. ಅದಕ್ಕಾಗಿ ತಾಯಿ ಪಕ್ಕದ ಮನೆಗೆ ಊಟ ತರಲು ಹೋಗಿದ್ದಳು. ಹಿಂತಿರುಗಿ ಬರುವಷ್ಟರಲ್ಲಿ ತಂದೆ ತಿಪ್ಪೇಶ್ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ. ಬೆನ್ನು, ಪಕ್ಕೆಗೆ ಹೊಡೆದಿದ್ದು, ಮಗ ಮೂರ್ಛೆ ಹೋಗಿದ್ದಾನೆ. ತಾಯಿ ತಕ್ಷಣ ಮಗನನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ಕರೆತಂದರು. ಅಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಸಿಎಂ ತವರಿನಲ್ಲೂ ವಕ್ಫ್ ಬೋರ್ಡ್ ಜಾದೂ; 2020 ರಲ್ಲಿ ಹಿಂದೂ ಜಾಗ, 2024 ರಲ್ಲಿ ವಕ್ಫ್ ಆಸ್ತಿ!
ತಿಪ್ಪೇಶ್ ವಿರುದ್ಧ ಪತ್ನಿ ಗೌರಮ್ಮ ಭರಮಸಾಗರ ಠಾಣೆಯಲ್ಲಿ ದುರುದ್ದೇಶದಿಂದ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಿದ್ದಾರೆ. ತಿಪ್ಪೇಶ್ ಹಾಗೂ ಗೌರಮ್ಮ ಕೆಲ ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ತಿಪ್ಪೇಶ್ ತನ್ನ ತಾಯಿ ಶೆಟ್ಟಮ್ಮ ಮಾತು ಕೇಳಿ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಗುರುವಾರ ಸಂಜೆ ಈ ವೇಳೆ ದಾರುಣ ಘಟನೆ ನಡೆದಿದ್ದು, ಭರಮಸಾಗರ (Bharamasagara) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ – ಜಮೀನಿನಲ್ಲಿದ್ದ ಪೈಪ್, ಯಂತ್ರಗಳು ಧ್ವಂಸ!