Bengaluru City
ಗೌರಿ ಹತ್ಯೆ ಮಾಡಿದ್ದ ರಿವಾಲ್ವರ್ ಟಿವಿಯೊಳಗಿಟ್ಟು ಆರಾಮಾಗಿದ್ದ ಸುಪಾರಿ ಕಿಲ್ಲರ್!

– ವಿಚಾರಣೆ ನಡೆಸಿದಷ್ಟೂ ಹೊರ ಬೀಳುತ್ತಿದೆ ರೋಚಕ ಮಾಹಿತಿ
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ವಿಶೇಷ ತನಿಖಾ ತಂಡ (ಎಸ್‍ಐಟಿ) ಮಹತ್ವದ ಪ್ರಗತಿ ಸಾಧಿಸಿದೆ. ಗೌರಿ ಹತ್ಯೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಪುರದ ಜೈಲಿನಲ್ಲಿದ್ದ ಕೈದಿ ನೀಡಿದ್ದ ಸುಳಿವು ಆಧರಿಸಿ ಸುಪಾರಿ ಕಿಲ್ಲರ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಯಲಹಂಕದ ಮನೆಯಲ್ಲಿ ಮೂರು ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ.
ಆರಂಭದಲ್ಲಿ ಈತ ನನಗೆ ಈ ಪ್ರಕರಣದ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದನಾದ್ರೂ ಎಸ್.ಐ.ಟಿ ಈ ಮನೆಯಲ್ಲಿ ತೀವ್ರ ಪರಿಶೋಧನೆ ನಡೆಸಿದೆ. ಈ ವೇಳೆ ಮನೆಯಲ್ಲಿದ್ದ ಖಾಲಿ ಟಿವಿಯ ಒಳಗಡೆ 3 ರಿವಾಲ್ವರ್ ಸಿಕ್ಕಿದೆ ಎಂದು ಪಬ್ಲಿಕ್ ಟಿವಿಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಸದ್ಯ ಸುಪಾರಿ ಕಿಲ್ಲರ್ ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಜೊತೆಗೆ ಆತನಿಂದ ವಶಕ್ಕೆ ಪಡೆದ ರಿವಾಲ್ವರ್ ತಪಾಸಣೆ ಮಾಡ್ತಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಂಟ್ರಿ ಮೇಡ್ ರಿವಾಲ್ವರ್ ರವಾನೆ ಮಾಡಲಾಗಿದೆ. ಸುಪಾರಿ ಕಿಲ್ಲರ್ ವಶಕ್ಕೆ ಪಡೆದು ಪೊಲೀಸರು ನಡೆಸಿದ ವಿಚಾರಣೆ ವೇಳೆ ಈತ ಇನ್ನಷ್ಟು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಈ ಪ್ರಕರಣದ ಹಿಂದೆ ಪ್ರಭಾವಿಗಳಿದ್ದಾರೆ ಎಂಬ ಮಾಹಿತಿಯನ್ನೂ ಈತ ನೀಡಿದ್ದಾನೆ ಎಂಬ ಮಾಹಿತಿಯೂ ಸಿಕ್ಕಿದೆ. ಇನ್ನೊಂದೆರಡು ದಿನಗಳಲ್ಲಿ ಗೌರಿ ಹತ್ಯೆಗೆ ಭಯಾನಕ ಹಾಗೂ ರೋಚಕ ಕ್ಲೈಮ್ಯಾಕ್ಸ್ ಸಿಗಲಿದೆ ಎನ್ನುವುದಂತೂ ಸುಳ್ಳಲ್ಲ.
