ಸೋಯಾ ಬೀನ್ ಹಾಗೂ ಸೋಯಾ ಹಾಲಿನಂತೆ ಸೋಯಾ ಚಂಕ್ಸ್ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದನ್ನ ಪಲಾವ್ ಅಥವಾ ಟೊಮೆಟೋ ಬಾತ್ ಮಾಡಿದಾಗ ಅದರಲ್ಲಿ ಬಳಸಿರುತ್ತೀರಿ. ಇದನ್ನು ಸೈಡ್ ಡಿಶ್‍ನಂತೆ ಅಥವಾ ಸಂಜೆಯ ತಿಂಡಿಗೆ ಸ್ನಾಕ್ಸ್ ಕೂಡ ಮಾಡಿಕೊಳ್ಳಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಂಪಲ್ ಆಗಿ ಸೋಯಾ ಚಂಕ್ಸ್ ಫ್ರೈ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ಕೂಡ ನಿಮ್ಮ ಮನೆಯಲ್ಲಿ ಒಂದ್ಸಲ ಇದನ್ನ ಟ್ರೈ ಮಾಡಿ ನೋಡಿ, ಖಂಡಿತವಾಗಿಯೂ ಇಷ್ಟವಾಗುತ್ತೆ.
ಬೇಕಾಗುವ ಸಾಮಗ್ರಿಗಳು:
ಸೋಯಾ ಚಂಕ್ಸ್ – 2 ಕಪ್
ಈರುಳ್ಳಿ – 1
ಕ್ಯಾಪ್ಸಿಕಮ್ – 1
ಶುಂಠಿ – ಅರ್ಧ ಇಂಚು
ಬೆಳ್ಳುಳ್ಳಿ – 4
ಜೀರಿಗೆ – 1 ಚಮಚ
ಟೊಮೆಟೋ – 2
ಸೋಯಾ ಸಾಸ್ – 1/2 ಚಮಚ
ಅರಿಶಿಣ – ಕಾಲು ಚಮಚ
ಖಾರದಪುಡಿ – 1 ಚಮಚ
ಧನಿಯಾ ಪುಡಿ – ಅರ್ಧ ಚಮಚ
ಜೀರಿಗೆ ಪುಡಿ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದಕ್ಕೆ ಸೋಯಾ ಚಂಕ್ಸ್ ಹಾಕಿ ಮುಚ್ಚಳ ಮುಚ್ಚಿ 8 ನಿಮಿಷ ಬೇಯಿಸಿ.
* ಮತ್ತೊಂದು ಪಾತ್ರೆಯಲ್ಲಿ ತಣ್ಣೀರು ಹಾಕಿ ಅದಕ್ಕೆ ಬೆಂದ ಸೋಯಾ ಚಂಕ್ಸ್ ಹಾಕಿ ಆರಲು ಬಿಡಿ.
* ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಒಂದು ಚಮಚ ಜೀರಿಗೆ ಹಾಕಿ ನಂತರ ಸಣ್ಣಗೆ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ ಹಾಗೂ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
* ಈರುಳ್ಳಿ ಕಂದು ಬಣ್ಣಕ್ಕೆ ಬಂದ ನಂತರ ಕ್ಯಾಪ್ಸಿಕಮ್ ಹಾಕಿ ಫ್ರೈ ಮಾಡಿ.
* ನಂತರ ಇದಕ್ಕೆ ಟೊಮೆಟೋ ಹಾಕಿ ಅದು ಬೇಯುವವರೆಗೂ ಚೆನ್ನಾಗಿ ಫ್ರೈ ಮಾಡಿ.
* ಟೊಮೆಟೋ ಬೆಂದ ನಂತರ, ಅರಿಶಿಣ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಸೋಯಾ ಸಾಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
* ನಂತರ ತಣ್ಣೀರಿನಲ್ಲಿರುವ ಸೋಯಾ ಚಂಕ್ಸ್ ತೆಗೆದು ಸಂಪೂರ್ಣವಾಗಿ ನೀರನ್ನು ಹಿಂಡಿ ಬಾಣಲೆಗೆ ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ.
* ನೀರು ಸಂಪೂರ್ಣವಾಗಿ ಇಂಗಿದ ನಂತರ ಕೊತ್ತಂಬರಿ ಸೊಪ್ಪು ಉದುರಿಸಿ ಒಲೆಯಿಂದ ಕೆಳಗಿಳಿಸಿ ಸವಿಯಲು ಕೊಡಿ.