Advertisements

ಸಿ.ಟಿ.ರವಿಯ ಹಿಂದುತ್ವಕ್ಕೆ ಮನುಷ್ಯ ಧರ್ಮದ ಪ್ರತಿಪಾದನೆ‌ ಮೂಲಕ‌ ಸಿದ್ದರಾಮಯ್ಯ ಟಕ್ಕರ್ – ಕಾರ್ಯಕ್ರಮದಲ್ಲಿ ಏಟು ಎದಿರೇಟು

ಬೆಂಗಳೂರು: ನೆಲಮಂಗಲದಲ್ಲಿ ಸೋಮವಾರ ದೇವಾಂಗ ಸಮುದಾಯದ ಶ್ರೀಗಳಾದ ದಯಾನಂದ ಪುರಿ ಮಹಾಸ್ವಾಮಿಗಳ 33 ನೇ ಪೀಠಾರೋಹಣದ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಈ ಸಮಾರಂಭ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಧ್ಯೆ ಜಾತಿ, ಧರ್ಮಗಳ ಕುರಿತ ಮಾತಿನ ದಂಗಲ್‌ಗೆ ಸಾಕ್ಷಿಯಾಯ್ತು.

Advertisements

ಸಮಾರಂಭದಲ್ಲಿ ಮೊದಲು ಮಾತಾಡಿದ ಸಿ.ಟಿ.ರವಿ, ಹಿಂದೂ ಸಮಾಜಕ್ಕೆ ಜಾತೀಯತೆ ಮುಳ್ಳಿನ ರೀತಿ‌ ಕಾಡ್ತಿದೆ. ಜಾತಿ ಮತ್ತು ಜಾತೀಯತೆ ಮಧ್ಯೆ ಅಂತರ ಇದೆ.‌ ಜಾತಿ ಅಸ್ಮಿತೆಯಾದರೆ, ಜಾತೀಯತೆ ಅಪರಾಧ. ಅಸ್ಪೃಶ್ಯತೆ ಇಡೀ ದೇಶವನ್ನು ದುರ್ಬಲಗೊಳಿಸಿದೆ. ಹಿಂದೂ ಸಮಾಜವನ್ನೂ ದುರ್ಬಲಗೊಳಿಸಿದೆ.‌ ಅಸ್ಪೃಶ್ಯತೆ ತೊಲಗಿಸಲು ಸ್ವಾಮೀಜಿಗಳು ನೇತೃತ್ವ ವಹಿಸಬೇಕು.‌ ಅಸ್ಪೃಶ್ಯತೆ, ಜಾತೀಯತೆಗೆ ಚಿಕಿತ್ಸೆ ಕೊಡಬೇಕು. ಇವು ಹಿಂದೂ ಸಮಾಜದ ಒಳಗಿನ ಮುಳ್ಳುಗಳು.‌ ಹೊರಗಿನಿಂದಲೂ ಮತಾಂಧತೆ ಎಂಬ ಮುಳ್ಳು ಹಿಂದೂ ಸಮಾಜಕ್ಕೆ ಚುಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾನೂ ಹಿಂದೂ ಇದೀನಿ ಅಂತ ಕೊಲೆ ಮಾಡಬೇಕನ್ನೋದು ಯಾವ ನ್ಯಾಯ – ಸಚಿವ ಶಂಕರ ಪಾಟೀಲ್

Advertisements

ಕೆಲವರು ಮತಗಳ ಆಸೆಗಾಗಿ ಮತಾಂಧತೆಗೆ ಇನ್ನೂ ಕಾವು ಕೊಡ್ತಿದ್ದಾರೆ. ಕೆಲ ರಾಜಕಾರಣಿಗಳು ಈ ಕೆಲಸ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದರು. ನಮ್ಮ ದೇಶ ಮತಾಂಧತೆಯ ಕೊಡಲಿಗೆ ತುಂಡಾಯ್ತು.‌ ಅದೇ ಮತಾಂಧತೆಗೆ ಕೆಲವರು ಪ್ರೋತ್ಸಾಹ ಕೊಡ್ತಿದ್ದಾರೆ. ಹೀಗಾದರೆ ಹಿಂದೂ ಸಮಾಜ ಉಳಿಯುತ್ತಾ? ಹಿಂದೂ ಕೆಲಸ ದುರ್ಬಲಗೊಳಿಸುವ ಹೀನ ಕೆಲಸ ಯಾರೂ ಮಾಡಬಾರದು ಎಂದು ಹಿಂದುತ್ವದ ಪರ ಮಾತಾಡುವ ಮೂಲಕ ಸಿದ್ದರಾಮಯ್ಯರನ್ನು ಕೆಣಕಿದರು.

ಸಿ.ಟಿ.ರವಿ ಭಾಷಣವನ್ನು ವೇದಿಕೆ ಮೇಲೆ ಆಸೀನರಾಗಿದ್ದ ಸಿದ್ದರಾಮಯ್ಯ ತದೇಕಚಿತ್ತದಿಂದಲೇ ಕೇಳಿಸಿಕೊಂಡರು. ಸಿ.ಟಿ.ರವಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಭಾಷಣದಲ್ಲಿ ಹಿಂದೂ ಸಮಾಜ ಉಳೀಬೇಕು ಎಂದ ಸಿ.ಟಿ.ರವಿಗೆ ತಿರುಗೇಟು ಕೊಟ್ಟರು. ನಮ್ಮೆಲ್ಲರಲ್ಲೂ ಮನುಷ್ಯತ್ವ ಇರಬೇಕು. ನಾವು ಸ್ವಾರ್ಥಿಗಳಾಗ್ತಿದ್ದೀವಿ.‌ ಕಾಯಿಲೆ ಬಂದಾಗ ರಕ್ತ ಬೇಕಿರುತ್ತೆ ಅನ್ಕೊಳ್ಳಿ. ಆಗ ನನಗೆ ಹಿಂದೂ ಧರ್ಮದವರ ರಕ್ತ ಕೊಡಿ ಅಂತ ಕೇಳ್ತೀವಾ? ಯಾವ ಧರ್ಮದ್ದೋ ರಕ್ತ ಕೊಡಿ, ಬದುಕಬೇಕಯ್ಯ ನಾನು ಅಂತೀವಿ ಅಲ್ವಾ? ಮುಸ್ಲಿಂ, ಕ್ರೈಸ್ತ ಇನ್ಯಾವುದೇ ಧರ್ಮ ಆಗಿರಲಿ ಮೊದಲು ರಕ್ತ ಕೊಡಿ ಅಂತೀವಿ. ರಕ್ತ ಪಡೆದು ಬದುಕಿದ ಮೇಲೆ ನಾವು ಇವನಾರವ ಇವನಾರವ ಅಂದ್ರೆ ಸರಿ ಆಗುತ್ತಾ? ಬದುಕುವುದಕ್ಕೆ ಯಾರ ರಕ್ತ ಬೇಕಾದ್ರೂ ದೇಹದೊಳಗೆ ಸೇರಿಸ್ಕೋತೀವಿ.‌ ನಾನು ಕುರುಬ, ಹಿಂದೂ ರಕ್ತನೇ ಬೇಕು ಅಂದ್ರೆ ಸತ್ ಹೋಗ್ತೀವಿ. ಜೀವ ಉಳಿಸ್ಕೊಳ್ಳೋಕೆ ರಕ್ತ ಬೇಕು ಅಷ್ಟೇ ಎಂಬ ಉದಾಹರಣೆ ಕೊಡುತ್ತಾ ಸಿ.ಟಿ.ರವಿ ಹಿಂದುತ್ವ ವಾದಕ್ಕೆ ತಿರುಗೇಟು ಕೊಟ್ಟರು. ಇದನ್ನೂ ಓದಿ: 15 ದಿನದ ಬಳಿಕ ಅಕ್ರಮ ಧ್ವನಿವರ್ಧಕಗಳ ವಿರುದ್ಧ ರಾಜ್ಯದಲ್ಲೂ ಕಾರ್ಯಾಚರಣೆ

Advertisements

ಸಿ.ಟಿ.ರವಿ ಪ್ರಸ್ತಾಪಿಸಿದ ಜಾತಿ ಬಗ್ಗೆಯೂ ಸಿದ್ದರಾಮಯ್ಯ ಟಕ್ಕರ್ ಕೊಟ್ಟರು. ಯಾವ ಸಮಾಜದಲ್ಲಿ ನೆಮ್ಮದಿ, ಮನುಷ್ಯತ್ವ ಇರಲ್ವೋ ಅಂಥ ಸಮಾಜ ಅಭಿವೃದ್ಧಿ ಆಗಲ್ಲ. ಯಾವ ನಾಡಿನಲ್ಲಿ ಶಾಂತಿ, ಸಾಮರಸ್ಯ ಇರುತ್ತೋ ಆ ನಾಡು, ದೇಶ ಅಭಿವೃದ್ಧಿ ಆಗುತ್ತೆ. ಇದನ್ನು ಪ್ರತಿಯೊಬ್ಬ ಭಾರತೀಯ ಅರ್ಥ ಮಾಡ್ಕೋಬೇಕು.‌ ಜಾತಿ ವ್ಯವಸ್ಥೆ ನಾವು ಮಾಡಿದ್ದಲ್ಲ. ನಾನು‌ ಕುರುಬರ ಜಾತೀಲಿ ಹುಟ್ಬೇಕು ಅಂತ ಅರ್ಜಿ ಹಾಕಿರಲಿಲ್ಲ ದೇವರಿಗೆ.‌ ಜಾತಿ ವ್ಯವಸ್ಥೆ ಇತ್ತು ಹುಟ್ಟಿದೀವಿ ಅಷ್ಟೆ. ಎಲ್ಲ ಧರ್ಮಗಳಿಗಿಂತಲೂ ಮನುಷ್ಯ ಧರ್ಮವೇ ಶ್ರೇಷ್ಠ. ದಯೆ ಇಲ್ಲದ ಧರ್ಮ‌ ಇಲ್ಲ. ಬಸವಣ್ಣ ಜಾತ್ಯತೀತ, ವರ್ಗ, ಜಾತಿ ರಹಿತ ಸಮ ಸಮಾಜದ ಕನಸು ಕಂಡಿದ್ದರು. ಸಂವಿಧಾನ ಜಾರಿಗೆ ಬಂದಾಗಲೇ ಅಸ್ಪೃಶ್ಯತೆ ತೊಡೆದು ಹಾಕಲಾಗಿದೆ. ಅಸ್ಪೃಶ್ಯತೆ ಪಾಲನೆ ಮಾಡ್ತಿರೋರು ಸಂವಿಧಾನ ವಿರೋಧಿಗಳು. ಸಮಾಜ ಸರ್ವ ಜನಾಂಗದ ಶಾಂತಿಯ ತೋಟದ ಹಾಗಿರಬೇಕು ಅಂದ್ರು ಕುವೆಂಪು. ಶಾಂತಿಯ ತೋಟ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಮನುಷ್ಯ ಧರ್ಮದ ಮಹತ್ವ ತಿಳಿಸಿದರು. ಇವರಿಬ್ಬರ ವಾದ ಸರಣಿಯನ್ನೂ ಕಾರ್ಯಕ್ರಮಕ್ಕೆ ಬಂದವರೆಲ್ಲರೂ ಆಸಕ್ತಿಯಿಂದ ಆಲಿಸಿದರು.

Advertisements
Exit mobile version