ಬೆಳಗಾವಿ: ಸ್ನೇಹಿತರ ಪ್ರಚೋದನೆಯಿಂದ ಕುಡಿದ ಮತ್ತಿನಲ್ಲಿ ಪ್ರಪಾತಕ್ಕೆ ಹಾರಿ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಅಂಬೋಲಿ ಬಳಿಯ ಕವಳಾ ಸೇಟ್ ಪಾಯಿಂಟ್ ನಲ್ಲಿ ಈ ಘಟನೆ ಸಂಭವಿಸಿದೆ. ಕೊಲ್ಲಾಪುರ ಜಿಲ್ಲೆಯ ಗಡಿಂಗ್ಲಜ್ ಮೂಲದ ಇಮ್ರಾನ್ ಗರಡಿ (25) ಮತ್ತು ಪ್ರಸಾದ್ ರಾಥೋಡ್ (21) ಮೃತ ದುರ್ದೈವಿಗಳು.
ಇಬ್ಬರು ಸ್ನೇಹಿತರು ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಪ್ರಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ಏಳು ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ಬಂದಾಗ ಈ ದುರ್ಘಟನೆ ಸಂಭವಿಸಿದೆ.
ಇಬ್ಬರು ಯುವಕರು ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ತಡೆಗೋಡೆಯ ಮೇಲೆ ಹತ್ತಿದ್ದಾರೆ. ನಂತರ ಸ್ವಲ್ಪ ಸಮಯ ಅಲ್ಲೇ ಕುಡಿದ ಮತ್ತಿನಲ್ಲಿ ತೂರಾಡಿದ್ದಾರೆ. ಅದರಲ್ಲೊಬ್ಬ ಪಕ್ಕದಲ್ಲೇ ಇದ್ದ ಕೊಳದ ನೀರಿಗೆ ಇಳಿದು ಮತ್ತೆ ಎದ್ದು ಬಂದಿದ್ದಾನೆ. ಈ ವೇಳೆ ಅಲ್ಲೇ ಇದ್ದ ಅವರ ಸ್ನೇಹಿತರು ಕಿರುಚುತ್ತಾ ಚೇಡಿಸೋದನ್ನ ವಿಡಿಯೋದಲ್ಲಿ ಕೇಳಬಹುದು. ನಂತರ ಯುವಕರು ಮತ್ತೊಮ್ಮೆ ತಡೆಗೋಡೆ ಮೇಲೆ ಹತ್ತಿ ಮತ್ತೊಂದು ಬದಿಗೆ ಹೋಗಿ ಕೈ ಕೈ ಹಿಡಿದುಕೊಂಡಿದ್ದು ನೋಡನೋಡ್ತಿದ್ದಂತೆ ಕೆಳಗೆ ಧುಮುಕಿದ್ದಾರೆ.
ಇನ್ನೂ ಮೃತರ ಶವಗಳು ಪತ್ತೆಯಾಗಿಲ್ಲ. ಈ ಕುರಿತು ಮಹಾರಾಷ್ಟ್ರದ ಅಂಬೋಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.