ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಅವರು 12 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಅಣ್ಣ ತಂಗಿಯಾಗಿ ಅಭಿನಯಿಸುತ್ತಿದ್ದಾರೆ.
12 ವರ್ಷಗಳ ಹಿಂದೆ `ಅಣ್ಣ-ತಂಗಿ’ ಸಿನಿಮಾದಲ್ಲಿ ಅಭಿನಯಿಸಿದ್ದು, ಇವರ ಕಾಂಬಿನೇಷನ್ ಅದ್ಭುತವಾಗಿ ಮೂಡಿಬಂದಿತ್ತು. ಅಣ್ಣ-ತಂಗಿ ಸಿನಿಮಾದಲ್ಲಿ ಇಬ್ಬರ ನಟನೆ ಪ್ರೇಕ್ಷಕರ ಮನದಲ್ಲಿ ಇನ್ನು ಅಚ್ಚಳಿಯಾಗಿ ಉಳಿದುಕೊಂಡಿದೆ. ಅಣ್ಣ-ತಂಗಿ ಮಾತ್ರವಲ್ಲದೇ `ತವರಿಗೆ ಬಾ ತಂಗಿ’ ಸಿನಿಮಾದಲ್ಲೂ ನಟಿಸಿದ್ದರು. ಈಗ ರಾಧಿಕಾ ಬ್ಯಾನರ್ ಅಡಿ ಶಮಿಕಾ ಎಂಟರ್ ಪ್ರೈಸಸ್ ಪ್ರೊಡಕ್ಷನ್ ನಲ್ಲಿ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಮತ್ತೆ ಅಭಿನಯಿಸಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಶಿವಣ್ಣ ಪ್ರೇಮ್ ಅವರ ನಿರ್ದೇಶನದ `ವಿಲನ್’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ನಟಿ ರಾಧಿಕಾ ಕುಮಾರ್‍ಸ್ವಾಮಿ ಅವರು ರವಿಚಂದ್ರನ್ ಅವರ ರಾಜೇಂದ್ರ ಪೊನ್ನಪ್ಪ ಮತ್ತು ಅರ್ಜುನ್ ಸರ್ಜಾ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ ಬ್ಯಾಂಕಾಂಕ್ ನಿಂದ ವಾಪಸ್ ಬಂದ ಮೇಲೆ ಅವರೊಂದಿಗೆ ಮಾತನಾಡಿ ಫೈನಲ್ ಮಾಡಬೇಕಾಗಿದೆ.
ಮುಂದಿನ ಪ್ರೊಡಕ್ಷನ್ ಬಗ್ಗೆ ರಾಧಿಕಾ ಅವರು ತಿಳಿಸುವುದಾಗಿ ಹೇಳಿದ್ದಾರೆ. ಇಂದಿನ ಅಣ್ಣ-ತಂಗಿ ಬಾಂಧವ್ಯದ ಅನುಗುಣವಾದ ಚಿತ್ರಕಥೆ ಇರಲಿದೆ ಎಂದು ಮೂಲಗಳು ತಿಳಿಸಿವೆ.