– ಸುದೀಪ್ ದಂಪತಿ ಜೊತೆ ‘ಮ್ಯಾಂಗೋ ಪಚ್ಚ’ ಸಿನಿಮಾ ವೀಕ್ಷಿಸಿದ ಶಿವರಾಜ್‌ಕುಮಾರ್
ಡಾ.ರಾಜ್‌ಕುಮಾರ್ ಕುಟುಂಬ ಉಲ್ಲೇಖಿಸಿ, ನಟ ಸುದೀಪ್ ಅವರ ‘ನೆಪೋಟಿಸಂ’ ಮಾತು ಕನ್ನಡ ಚಿತ್ರರಂಗದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ ನಟ ಶಿವರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದೀಪ್ ದಂಪತಿ ಜೊತೆ ‘ಮ್ಯಾಂಗೋ ಪಚ್ಚ’ ಸಿನಿಮಾ ವೀಕ್ಷಿಸಿದ ಬಳಿಕ ಮಾತನಾಡಿದ ಶಿವಣ್ಣ, ಸುದೀಪ್ ಅವರು ಮಾತಾಡಿದ್ದನ್ನ ನಾನು ನೋಡಿದೆ. ಆ ಪ್ರಶ್ನೆಯನ್ನ ಮಾಧ್ಯಮದವರು ಯಾಕೆ ಕೇಳಿದ್ರಿ ಮೊದಲಿಗೆ? ಎಲ್ಲಾ ಮನುಷ್ಯ ಕನಸು ಕಾಣ್ತಾನೆ. ಇವರ ಮಕ್ಕಳು, ಅವರ ಮಕ್ಕಳೇ ಕನಸು ಕಾಣಬೇಕಂತೇನಿಲ್ಲ. ನಾನು ಅದನ್ನೆಲ್ಲಾ ಕೇರ್ ಮಾಡಲ್ಲ. ಮಾತಾಡಿದ್ದನ್ನ ಫುಲ್ ನೋಡಿದ್ದೇನೆ ಎಂದು ತಿಳಿಸಿದರು.
ಎಲ್ಲಾ ಮನುಷ್ಯರಿಗೂ ಏನಾದ್ರೂ ಮಾಡ್ಬೇಕು ಅನ್ನೋ ಹಂಬಲ ಇದ್ದೇ ಇರುತ್ತೆ. ಅದನ್ನೆಲ್ಲಾ ಸ್ವಾಗತಿಸಬೇಕು. ಅವನೇ ನಿಜವಾದ ಮನುಷ್ಯ. ಸುದೀಪ್ ಮುಂದೆಯೇ ಹೇಳ್ತಿದ್ದೀನಿ ಎಂದರು.
ಯುವಜನರು ಸಿನಿಮಾಗಳನ್ನ ನೋಡಿ, ನಮ್ಮ ಸಿನಿಮಾನೂ ನೋಡ್ತೀರಿ. ಹೊಸಬರದ್ದೂ ನೋಡಿ. ಯಾಕಂದ್ರೆ ನಮ್ಮಲ್ಲಿ ಹೊಸ ಹೀರೋಗಳು ಸ್ಟ್ಯಾಂಡ್ ಆಗಬೇಕು ಎಂದು ಮನವಿ ಮಾಡಿದರು.
ಏನಿದು ನೆಪೋಟಿಸಂ ಚರ್ಚೆ?
ಮ್ಯಾಂಗೋ ಪಚ್ಚ ಸಿನಿಮಾದಲ್ಲಿ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಹೀರೋ ಆಗಿ ನಟಿಸಿದ್ದಾರೆ. ಜೂನ್‌ಯರ್ ಕಿಚ್ಚ ಎಂಬ ಟ್ಯಾಗ್ ಲೈನ್‌ನೊಂದಿಗೆ ಸಂಚಿತ್ ಲಾಂಚ್ ಆಗಿದ್ದಾರೆ. ಈ ಸಿನಿಮಾಗೆ ಸುದೀಪ್ ಸಾಥ್ ನೀಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಎದುರಾದ ‘ನೆಪೋಟಿಸಂ’ ಪ್ರಶ್ನೆಗೆ ಸುದೀಪ್ ಕಿಡಿಕಾರಿದ್ದಾರೆ. ನೆಪೋಟಿಸಂ ಪ್ರಶ್ನೆಯನ್ನು ನೀವು ರಾಜ್‌ಕುಮಾರ್ ಮಕ್ಕಳಿಗೂ ಕೇಳ್ತೀರಾ, ಶಿವಣ್ಣ ಅವರನ್ನು ಕೇಳ್ತೀರಾ ಎಂದು ಗರಂ ಆಗಿಯೇ ಸುದೀಪ್ ಮರುಪ್ರಶ್ನೆ ಹಾಕಿದ್ದರು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
