– ರೇನ್‌ಕೋಟ್, ಗಮ್ ಬೂಟ್ ಧರಿಸಿ ಸಿದ್ದರಾಮಯ್ಯ ಸ್ಥಳ ವೀಕ್ಷಣೆ
– ಕಾರ್ಯಾಚರಣೆ ಸಹಕಾರಕ್ಕೆ ಭೂಸೇನೆ, ನೌಕಾದಳಕ್ಕೆ ಮನವಿ ಮಾಡಿದ್ದೇವೆಂದ ಸಿಎಂ
ಕಾರವಾರ: 10 ಮಂದಿಯನ್ನು ಬಲಿ ಪಡೆದಿರುವ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ (Shirur Landslide) ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಡೆಬಿಡದೇ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಸಿಎಂ ಸ್ಥಳ ವೀಕ್ಷಣೆ ಮಾಡಿದರು.
ಸಿದ್ದರಾಮಯ್ಯ ಭೇಟಿ ವೇಳೆ ಸ್ಥಳದಲ್ಲಿ ಮಳೆಯಾಗುತ್ತಿತ್ತು. ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ರೇನ್‌ಕೋಟ್, ಗಮ್ ಬೂಟ್ ಧರಿಸಿ ಕೊಡೆ ಹಿಡಿದು ಅಧಿಕಾರಿಗಳ ಜೊತೆ ಸಿಎಂ ಸ್ಥಳ ಪರಿಶೀಲಿಸಿದರು. ಕೆಸರುಮಯವಾಗಿದ್ದ ಹಾದಿಯಲ್ಲಿ ಪಂಚೆ ಎತ್ತಿ ಹಿಡಿದು ಸಿದ್ದರಾಮಯ್ಯ ಜಾಗರೂಕತೆಯಿಂದ ಹೆಜ್ಜೆ ಹಾಕಿದರು ದೃಶ್ಯ ಕಂಡುಬಂತು. ಇದನ್ನೂ ಓದಿ: ಸಮಸ್ಯೆ ಕೇಳಲು ಬಂದ ಸಚಿವ ಬೋಸರಾಜುಗೆ ಸಂತ್ರಸ್ತರಿಂದ ತರಾಟೆ
ಗೋವಾ ಮೂಲಕ ಮುಖ್ಯಮಂತ್ರಿಗಳು ಗುಡ್ಡ ಕುಸಿತ ಸ್ಥಳಕ್ಕೆ ತೆರಳಿದ್ದರು. ಕಂದಾಯ ಸಚಿವ ಕೃಷ್ಣಬೈರೇಗೌಡ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ್ ಶೈಲ್, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಿತೀಶ್ ಕುಮಾರ್ ಸಿಂಗ್ ಹಾಗೂ ಜಿಲ್ಲಾಧಿಕಾರಿಗಳು ಸಿಎಂಗೆ ಸಾಥ್ ನೀಡಿದರು. ಈ ವೇಳೆ ಸಿಎಂ ಸ್ಥಳದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಶಿರೂರು ಗುಡ್ಡ ಕುಸಿತಕ್ಕೆ ಸಿಲುಕಿದವರ ಪೈಕಿ ಇದುವರೆಗೆ 7 ಮಂದಿ ಮೃತದೇಹ ಪತ್ತೆಯಾಗಿದೆ. ಇನ್ನೂ ಮೂವರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ರಾಜಕೀಯ ದ್ವೇಷಕ್ಕಾಗಿ ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಾರದು: ಬಸವರಾಜ ಬೊಮ್ಮಾಯಿ
ಸ್ಥಳ ಪರಿಶೀಲನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಮಳೆಯಲ್ಲೇ ಕಾರ್ಯಾಚರಣೆ ಮುಂದುವರಿದಿದೆ. ಅಧಿವೇಶನ ನಡೆದಿದ್ದ ಕಾರಣ ಬರಲು ಅಗಲಿಲ್ಲ. ಈವರೆಗೂ 7 ಜನರ ಮೃತದೇಹಗಳು ಪತ್ತೆಯಾಗಿವೆ. ಉಳಿದರ 3 ಮೃತದೇಹಗಳ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಭೂಸೇನೆ ಹಾಗೂ ನೌಕದಳ ಕಾರ್ಯಾಚರಣೆಗೂ ಮನವಿ ಮಾಡಿದ್ದೇವೆ. ಸದ್ಯದಲ್ಲೇ ಮಿಲಿಟರಿ ಕಾರ್ಯಚರಣೆಯೂ ಆರಂಭವಾಗಲಿದೆ ಎಂದು ತಿಳಿಸಿದರು.
ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಿದ್ದೇವೆ. ರಾಜ್ಯ ಸರ್ಕಾರದಿಂದ ವಿಳಂಬ ಕಾರ್ಯಾಚರಣೆ ಆಗಿಲ್ಲ. ದುರಂತ ಸಂಭವಿಸುತ್ತಲೆ ಕಾರ್ಯಾಚರಣೆ ಆರಂಭ ಮಾಡಿದ್ದೇವೆ. ಘಟನೆ ಸಂಭವಿಸಿದ ಬೆನ್ನಲ್ಲೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿದ್ದಾರೆ. ಡಿಸಿ, ಎಸ್ಪಿ ಸ್ಥಳದಲ್ಲೇ ಇದ್ದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಹೆಚ್‌ಡಿಕೆ ರಾಜಕಾರಣ ಮಾಡಬಹುದು, ನಾನು ರಾಜಕಾರಣ ಮಾಡುವುದಿಲ್ಲ. ನಾನು ಯಾರ ಮೇಲೆಯೂ ಆರೋಪ ಮಾಡುವುದಿಲ್ಲ. ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದೇನೆ. ನಮ್ಮ ಸರ್ಕಾರ ವಿಳಂಬ ಮಾಡಿಲ್ಲ, ನಿರ್ಲಕ್ಷ್ಯ ಮಾಡಿಲ್ಲ. ತ್ವರಿತವಾಗಿ ಕಾರ್ಯಚರಣೆ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿಗೆ ಪ್ರಧಾನಿ ಮೋದಿ ಸಹೋದರ ಆಗಮನ