ಅವಳು ಮುಸ್ಲಿಂ, ಮದುವೆ ಆಗಲ್ಲ ಅಂತ 10 ವರ್ಷ ಜೊತೆಗಿದ್ದ ಪ್ರೇಯಸಿಯನ್ನು ಕೊಂದ ದುಷ್ಟ

Public TV
1 Min Read
Shibba and Deepak

ಚಂಢೀಗಡ: ವ್ಯಕ್ತಿಯೊಬ್ಬ 10 ವರ್ಷಗಳ ಕಾಲ ಜೊತೆಗಿದ್ದ ಪ್ರೇಯಸಿಯನ್ನು ಆಕೆ ಮುಸ್ಲಿಂ ಎಂಬ ಕಾರಣಕ್ಕೆ ಹತ್ಯೆ ಮಾಡಿದ ಘಟನೆ ಹರಿಯಾಣದ (Haryana) ಫರಿದಾಬಾದ್‌ನಲ್ಲಿ ನಡೆದಿದೆ.

ಹತ್ಯೆಯಾದ ಯುವತಿಯನ್ನು ಶಿಬ್ಬಾ (33) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು ಹರಿಯಾಣ ಮೂಲದ ಆಕೆಯ ಗೆಳೆಯ ದೀಪಕ್ ಎಂದು ಗುರುತಿಸಲಾಗಿದೆ. ಧಾರ್ಮಿಕ ಭಿನ್ನಾಭಿಪ್ರಾಯ ಮತ್ತು ಮದುವೆಯಾಗಲು ಒತ್ತಡ ಹೇರಿದ್ದಕ್ಕೆ ಕೊಲೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ (Delhi) ಮೂಲದ ಬದರ್ಪುರದ ಮೋಹನ್ ಬಾಬಾ ನಗರದ ನಿವಾಸಿ ಶಿಬ್ಬಾ ಖಾಸಗಿ ಬ್ಯಾಂಕಿನಲ್ಲಿ ವಿಮಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಆಕೆ ಜು.24ರ ಬೆಳಿಗ್ಗೆ, ತಾನು ಎಂದಿನಂತೆ ಕಚೇರಿಗೆ ಹೋಗುತ್ತಿರುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿ ಹೋಗಿದ್ದಳು. ತಾಯಿಗೆ ಮಧ್ಯಾಹ್ನ ಕರೆ ಮಾಡಿ ಮಾತಾಡಿದ್ದಳು. ಆದರೆ ರಾತ್ರಿಯ ಹೊತ್ತಿಗೆ, ಅವಳು ಮನೆಗೆ ವಾಪಸ್‌ ಆಗಿರಲಿಲ್ಲ. ಫೋನ್‌ ಸಹ ಸ್ವಿಚ್‌ ಆಫ್‌ ಆಗಿತ್ತು.

ಆ ದಿನ ಶಿಬ್ಬಾ ಒಬ್ಬ ವ್ಯಕ್ತಿಯೊಂದಿಗೆ ಹೊಟೆಲ್‌ಗೆ ತೆರಳಿರುವುದು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪರಿಶೀಲಿಸಿದಾಗ ಆತ ದೀಪಕ್ ಎಂದು ಗುರುತಿಸಲಾಗಿತ್ತು. ಆ ಸಂಜೆ ಅವನು ಒಬ್ಬಂಟಿಯಾಗಿ ಹೋಟೆಲ್‌ನಿಂದ ಹೋಗುತ್ತಿರುವುದು ಸಹ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ದೀಪಕ್ ಮೊಬೈಲ್ ಫೋನ್ ಮೂಲಕ ಆತನ ಸ್ಥಳವನ್ನು ಪತ್ತೆಹಚ್ಚಿದ ಪೊಲೀಸರು, ಆತನನ್ನು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಬಂಧಿಸಿದ್ದಾರೆ. ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಿದ್ದಾರೆ. ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ವಿಚಾರಣೆಯ ಸಮಯದಲ್ಲಿ ಮಹಿಳೆ ಮದುವೆಗೆ ಒತ್ತಡ ಹೇರುತ್ತಿದ್ದ ಕಾರಣ ಕತ್ತುಹಿಸುಕಿ ಆಕೆಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ, ಆಕೆ ಮುಸ್ಲಿಂ ಆಗಿರುವುದರಿಂದ ಸಂಬಂಧವನ್ನು ಮುಂದುವರಿಸಲು ಇಷ್ಟವಿರಲಿಲ್ಲ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article