ಬಾಲಿವುಡ್ ನಟ ಶಾರುಖ್ ಖಾನ್ ಕುರಿತು ಭಾರತದಲ್ಲಿ ಅಸಮಾಧಾನ ಭುಗಿಲೆದಿದ್ದೆ. ಅದರಲ್ಲೂ ಪಠಾಣ್ ವಿಚಾರದಲ್ಲಿ ಅವರ ಸಿನಿಮಾಗಳನ್ನು ಬಾಯ್ಕಾಟ್ ಮಾಡಬೇಕು ಎಂದು ದೊಡ್ಡ ಅಭಿಯಾನವೇ ಶುರುವಾಗಿದೆ. ಈ ವಿವಾದದ ಕುರಿತು ದಿನಕ್ಕೊಂದು ಹೇಳಿಕೆಗಳು ಹೊರ ಬರುತ್ತಿವೆ. ಆದರೂ, ಶಾರುಖ್ ಖಾನ್ ಜನಪ್ರಿಯತೆ ಕುಂದಿಲ್ಲ ಎನ್ನುವುದಕ್ಕೆ ಇಲ್ಲೊಂದು ಸಾಕ್ಷಿ ಸಿಕ್ಕಿದೆ. ಪ್ರತಿಷ್ಠಿತ ಮ್ಯಾಗಜಿನ್ ವೊಂದು ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶಾರುಖ್ ಖಾನ್ ಹೆಸರು ಕಾಣಿಸಿಕೊಂಡಿದೆ.
ಪ್ರತಿಷ್ಠಿತ ಎಂಪಾಯರ್ ಮ್ಯಾಗಜಿನ್ ಈ ಮಾಹಿತಿಯನ್ನು ಹೊರ ಹಾಕಿದ್ದು, ಭಾರತದ ನಟರಲ್ಲಿ ಈ ಸ್ಥಾನವನ್ನು ಪಡೆದ ಏಕೈಕ ನಟ ಶಾರುಖ್ ಖಾನ್ ಎನ್ನುವುದು ವಿಶೇಷ. ಈ ಮಾಹಿತಿಯನ್ನು ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಏನೇ ವಿವಾದ ಮಾಡಿದರೂ, ಅವರ ಜನಪ್ರಿಯತೆ ಯಾವತ್ತೂ ಕಡಿಮೆ ಆಗಲ್ಲ ಎಂದು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಜನವರಿ 25ಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲ ಮೊನ್ನೆಯಷ್ಟೇ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಹಾಕಿದ್ದರು ಎನ್ನುವ ಕಾರಣಕ್ಕಾಗಿ ಭಾರೀ ವಿವಾದವಾಗಿತ್ತು. ಇದು ಹಿಂದೂಗಳಿಗೆ ಮಾಡುತ್ತಿರುವ ಅಪಮಾನ ಎಂದು ಬಿಂಬಿಸಲಾಗಿತ್ತು. ಶಾರುಖ್ ಖಾನ್ ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಲಾಗಿತ್ತು.
ವಿವಾದದ ಕುರಿತು ಶಾರುಖ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಿವಾದ ಮಾಡುವ ಮೂಲಕ ಸಿನಿಮಾಗೆ ಮತ್ತಷ್ಟು ಪ್ರಚಾರ ಕೊಟ್ಟಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಹೇಳಿದ್ದರು. ನೀವು ಏನೇ ಬಾಯ್ಕಾಟ್ ಮಾಡಿರಿ, ಸಿನಿಮಾ ಗೆಲ್ಲುತ್ತದೆ ಎನ್ನುವ ವಿಶ್ವಾವನ್ನೂ ಅವರು ವ್ಯಕ್ತ ಪಡಿಸಿದ್ದರು. ಶಾರುಖ್ ಏನೇ ಹೇಳಿದರೂ, ವಿವಾದದ ಉರಿ ಇನ್ನೂ ತಣ್ಣಗಾಗಲಿಲ್ಲ. ಸಿನಿಮಾ ಪ್ರೇಮಿಗಳು ಮಾತ್ರವಲ್ಲ, ರಾಜಕಾರಣಿಗಳು ಕೂಡ ಈ ವಿವಾದಲ್ಲಿ ಪ್ರವೇಶ ಮಾಡಿದ್ದಾರೆ. ಹಾಗಾಗಿ ವಿವಾದ ದೊಡ್ಡದಾಗಿದೆ.