ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಯ (Residential School) ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ (Sexual Abuse) ನಡೆಸಿರುವ ಆರೋಪದಡಿ ಐವರನ್ನು ಬಂಧಿಸಲಾಗಿದೆ.
ಇದೇ ಮಾರ್ಚ್ 7ರಂದು ಘಟನೆ ನಡೆದಿದ್ದು, ಮರುದಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಮೋದಿ ರೋಡ್ ಶೋ – ಭಾನುವಾರ ಏನೇನು ಕಾರ್ಯಕ್ರಮ?
ಮಾ.7 ರಂದು ಸದರಿ ಹಾಸ್ಟೆಲ್‌ನಲ್ಲಿ ಸೌಲಭ್ಯ ಇಲ್ಲ ಎಂದು ಮಕ್ಕಳು ದಿಢೀರ್ ಪ್ರತಿಭಟನೆಗಿಳಿದಿದ್ದರು. ಈ ವೇಳೆ ಕೆಲವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಸಂಬಂಧ ಪ್ರಾಂಶುಪಾಲರಿಗೆ, ಶಿಕ್ಷಕರಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದರು. ಇದನ್ನೂ ಓದಿ: ಹೋಳಿ ಹಬ್ಬಕ್ಕೆ ಕೋಳಿ ಸಾರು ಮಾಡಲ್ಲ ಅಂದಿದ್ದಕ್ಕೆ ಹೆಂಡತಿ ಕೈಮುರಿದ ಪತಿರಾಯ
ಇದಾದ ಬಳಿಕ ವಿವಿಧ ಇಲಾಖೆಗಳನ್ನೊಳಗೊಂಡ ಅಧಿಕಾರಿಗಳ ತಂಡ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ವೇಳೆ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದಾಗ 10ನೇ ತರಗತಿಯ ಮೂವರು, 7ನೇ ತರಗತಿಯ ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಹಾಸ್ಟೆಲ್ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವವರ ನಿರ್ಲಕ್ಷ್ಯವೂ ಇದಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ದೂರಿನ ಮೇರೆಗೆ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು, ಒಬ್ಬ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿ ಸೇರಿ ಐವರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಬಂಧಿತ ಆರೋಪಿಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಐವರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ (SC ST Act) ಹಾಗೂ ಪೋಕ್ಸೋ ಕಾಯ್ದೆ (POCSO Act) ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.