25 ಸಾವಿರ ಶಿಕ್ಷಕರನ್ನು ವಜಾಗೊಳಿಸಿದ ಸುಪ್ರೀಂ – ದೀದಿ ಸರ್ಕಾರಕ್ಕೆ ಮುಖಭಂಗ

Public TV
2 Min Read
supreme Court 1

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಅಕ್ರಮವಾಗಿ ನೇಮಕ ಮಾಡಲಾಗಿದ್ದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 25,753 ಶಿಕ್ಷಕರು (Teacher) ಮತ್ತು ಬೋಧಕೇತರ ಸಿಬ್ಬಂದಿಯನ್ನು ಅಮಾನ್ಯಗೊಳಿಸಿದ್ದ ಕೋಲ್ಕತ್ತಾ ಹೈಕೋರ್ಟ್ (Calcutta High Court) ತೀರ್ಪನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠವು, ನೇಮಕಾತಿ ಪ್ರಕ್ರಿಯೆಯು ಗಂಭೀರ ಅಕ್ರಮಗಳಿಂದ ಕೂಡಿದೆ. ಅಭ್ಯರ್ಥಿಗಳನ್ನು ಹುದ್ದೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇಡೀ ಆಯ್ಕೆ ಪ್ರಕ್ರಿಯೆಯೇ ಕಳಂಕಿತವಾಗಿದ್ದು, ನೇಮಕಾತಿ ಅಮಾನ್ಯಗೊಳಿಸಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: West Bengal: 2016ರ ನೇಮಕಾತಿ ರದ್ದುಗೊಳಿಸಲು ಕೋಲ್ಕತ್ತಾ ಹೈಕೋರ್ಟ್‌ ಆದೇಶ

COURT

ಏಪ್ರಿಲ್ 2024ರಲ್ಲಿ ವಿವಿಧ ಶಾಲೆಗಳ 25,000 ಕ್ಕೂ ಹೆಚ್ಚು ಸಿಬ್ಬಂದಿ ನೇಮಕಾತಿಯನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು. ಇನ್ನೂ ಅಭ್ಯರ್ಥಿಗಳು ಪರಿಹಾರವಾಗಿ, ಈಗಾಗಲೇ ಪಡೆದ ಯಾವುದೇ ಸಂಬಳ ಅಥವಾ ಪ್ರಯೋಜನಗಳನ್ನು ಮರುಪಾವತಿಸಬೇಕಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

ಏನಿದು ಪ್ರಕರಣ?
ಈ ಅಕ್ರಮ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) 2016 ರಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದೆ. ಒಟ್ಟು 24,640 ಖಾಲಿ ಹುದ್ದೆಗಳಿಗೆ ಒಟ್ಟು 23 ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿ ಪರೀಕ್ಷೆ ಬರೆದಿದ್ದರು. ಇದರ ಹೊರತಾಗಿಯೂ, 25,753 ನೇಮಕಾತಿ ಪತ್ರಗಳನ್ನು ನೀಡಲಾಗಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳು, ಒಎಂಆರ್ ಶೀಟ್‌ಗಳನ್ನು ತಿರುಚುವುದು ಮತ್ತು ರ‍್ಯಾಂಕ್-ಜಂಪಿಂಗ್ ವಿಚಾರಣೆ ವೇಳೆ ಬಯಲಾಗಿತ್ತು. ಇದು ನೇಮಕಾತಿ ರದ್ದಿಗೆ ಕಾರಣವಾಗಿತ್ತು.

ಪಶ್ಚಿಮ ಬಂಗಾಳ ಸರ್ಕಾರ ಸೇರಿದಂತೆ ಹಲವಾರು ಪಕ್ಷಗಳು ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದವು. ಡಿಸೆಂಬರ್ 19, 2024 ರಂದು, ಸುಪ್ರೀಂ ಕೋರ್ಟ್ ಈ ವಿಷಯದ ಕುರಿತು ವಿಚಾರಣೆಯನ್ನು ಪ್ರಾರಂಭಿಸಿತ್ತು. 2025ರ ಫೆಬ್ರವರಿ 10 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಅಂತಿಮ ತೀರ್ಪು ನೀಡಲಾಗಿದೆ.

ಸುಪ್ರೀಂ ಕೋರ್ಟ್‌ ನೇಮಕಾತಿ ರದ್ದುಗೊಳಿಸಿದರೂ, ನೇಮಕಾತಿ ಅಕ್ರಮಗಳ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನ್ನ ತನಿಖೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದೆ. ಇದನ್ನೂ ಓದಿ: ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಜಡ್ಜ್‌ಗಳ ಆಸ್ತಿ ವಿವರ ಬಹಿರಂಗ – ವೆಬ್‍ಸೈಟ್‌ಲ್ಲಿ ಮಾಹಿತಿ ಅಪ್ಲೋಡ್‍ಗೆ ನಿರ್ಧಾರ

Share This Article