ನವದೆಹಲಿ: ಅನುಮತಿಯಿಲ್ಲದೆ ಜಂತರ್ ಮಂತರ್ನ(Jantar Mantar) ಬ್ಯಾರಿಕೇಡ್ ಉಲ್ಲಂಘಿಸಿ ರಾಷ್ಟ್ರಧ್ವಜ ಹಾರಿಸಿದ ಸಿಜೆಪಿ (CJP) ಮುಖಂಡರಾದ ಸೌರವ್ ದಾಸ್(Saurav Das) ಮತ್ತು ಅಶುತೋಷ್ ರಾಂಕಾ(Ashutosh Ranka) ಅವರ ವರ್ತನೆಯನ್ನು ದೆಹಲಿ ಹೈಕೋರ್ಟ್(Delhi High Court) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಜಂತರ್ ಮಂತರ್ ಅತಿಕ್ರಮಣ ಪ್ರಕರಣದಲ್ಲಿ ತಮ್ಮ ನ್ಯಾಯಾಂಗ ಬಂಧನ ವಿಸ್ತರಿಸಿದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನ್ಯಾ.ಸುಬ್ರಮೋನಿಯಂ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು.
ಈ ವೇಳೆ ಕೋರ್ಟ್, ಬ್ಯಾರಿಕೇಡ್ಗಳನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಹಾಕಲಾಗಿರುತ್ತದೆ. ನೀವು ಅದನ್ನು ಮುರಿದಾಗ ಇನ್ನಷ್ಟು ಜನರು ಒಳನುಗ್ಗುವ ಅಪಾಯವಿರುತ್ತದೆ. ಇತರ ದೇಶಗಳಲ್ಲಿ ಹಿಂಸಾಚಾರ ಮತ್ತು ಬೆಂಕಿ ಹಚ್ಚುವ ಘಟನೆಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಿಮ್ಮ ಹೋರಾಟ ಶಾಂತಿಯುತವಾಗಿಯೇ ಆರಂಭವಾಗಿರಬಹುದು. ಆದರೆ ಕಿಡಿಗೇಡಿಗಳು ಗುಂಪಿಗೆ ಸೇರಿ ಹೆಸರು ಹಾಳು ಮಾಡುವುದನ್ನು ತಡೆಯಲು ಪೊಲೀಸರ ಅನುಮತಿ ಪಡೆಯುವುದು ಕಡ್ಡಾಯ ಎಂದು ಸಿಜೆಪಿ ಮುಖಂಡರ ನಡವಳಿಕೆಯನ್ನು ಕಟು ಪದಗಳಿಂದ ತರಾಟೆಗೆ ತೆಗೆದುಕೊಂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಭೀಕ್ ಚಿಮ್ನಿ ಅವರನ್ನು ಪ್ರಶ್ನಿಸಿದ ನ್ಯಾಯಾಲಯ, ಅ.11 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 126 ಮತ್ತು 170 ರ ಅಡಿಯಲ್ಲಿ ಮುನ್ನೆಚ್ಚರಿಕೆ ಬಂಧನಕ್ಕೊಳಗಾಗಿದ್ದಾಗ ಇಬ್ಬರೂ ತಲಾ 50,000 ರೂ. ಮೌಲ್ಯದ ಶಾಂತಿ ಪಾಲನಾ ಬಾಂಡ್ ಸಲ್ಲಿಸಿದ್ದರು ಎಂಬುದನ್ನು ನೆನಪಿಸಿತು. ಒಂದು ವರ್ಷ ಸಾರ್ವಜನಿಕ ಶಾಂತಿ ಕದಡದಂತೆ ಒಪ್ಪಂದ ಮಾಡಿಕೊಂಡಿದ್ದರೂ, ಜಂತರ್ ಮಂತರ್ ಪ್ರವೇಶಿಸಿ ಬಾಂಡ್ ಉಲ್ಲಂಘಿಸಿದ ನಂತರ ಬಿಎನ್ಎಸ್ಎಸ್ ಅಡಿಯಲ್ಲಿ ನಿಗದಿತ ಪ್ರಕ್ರಿಯೆಯನ್ನು ಏಕೆ ಪಾಲಿಸಲಿಲ್ಲ ಎಂದು ಕೋರ್ಟ್ ಪ್ರಶ್ನಿಸಿತು.
ಇದೇ ವೇಳೆ ಅರ್ಜಿದಾರರ ವಯಸ್ಸಿನ ಬಗ್ಗೆ ವಿಚಾರಿಸಿದಾಗ, ಸೌರವ್ ದಾಸ್ (27) ಮತ್ತು ಅಶುತೋಷ್ ರಾಂಕಾ (32) ಎಂದು ವಕೀಲರು ತಿಳಿಸಿದರು. ಈ ವೇಳೆ ನ್ಯಾಯಪೀಠ, “1997ರ ನಂತರ ಜನಿಸಿದವರನ್ನು ಜೆನ್ ಝಿ (Gen Z) ಎನ್ನಲಾಗುತ್ತದೆ ಎಂದು ನಮಗೆ ತಿಳಿಸಲಾಗಿದೆ, ಹಾಗಾದರೆ ನೀವು ಆ ಪೀಳಿಗೆಯವರಲ್ಲ” ಎಂದು ಅಭಿಪ್ರಾಯಪಟ್ಟಿತು.
ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ನ್ಯಾಯಾಂಗ ಬಂಧನ ವಿಸ್ತರಣೆ ಪ್ರಶ್ನಿಸಿದ್ದ ಅರ್ಜಿಯನ್ನು ಹಿಂಪಡೆಯಲು ಹೈಕೋರ್ಟ್ ಅನುಮತಿ ನೀಡಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ಅವರ ಅರ್ಜಿಯ ವಿಚಾರಣೆಯನ್ನು ನಾಳೆ ಬೆಳಿಗ್ಗೆ 10:30ಕ್ಕೆ ಮುಂದೂಡಿದೆ.
