ಬೆಳಗಾವಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸರ್ಕಾರದ ಅಸ್ಥಿರತೆಗೆ ಕಾರಣವಾಗುತ್ತದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರೀತಿಯ ಹೇಳಿಕೆಗಳು ಸರ್ಕಾರದಲ್ಲಿ ಅಸ್ಥಿರತೆ ಹುಟ್ಟುಹಾಕಬಹುದು ಎಂದು ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಹಿಂದೆಂದೂ ಕಂಡು ಕೇಳರಿಯದ ಪ್ರವಾಹಕ್ಕೆ ರಾಜ್ಯದ ಜನತೆ, ರೈತರು ತತ್ತರಿಸಿ ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೂರೇ ದಿನ ಅಧಿವೇಶನ ಕರೆದಿರುವುದು ಸರಿಯಲ್ಲ. ಕನಿಷ್ಟ 8 ದಿನವಾದರೂ ಅಧಿವೇಶನ ಕರೆದಿದ್ದರೆ ಪ್ರವಾಹದ ಬಗ್ಗೆ ಚರ್ಚಿಸಲು ಅನುಕೂಲವಾಗುತಿತ್ತು. ಅಧಿವೇಶನ ವಿಸ್ತರಿಸುವಂತೆ ರಾಜ್ಯ ಸರ್ಕಾರವನ್ನು ಈ ಮೂಲಕ ಆಗ್ರಹಿಸುತ್ತೇನೆ. ಪ್ರವಾಹಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಬೇಕಿತ್ತು. ಆದರೆ ಇದಾವುದನ್ನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್ ಇಬ್ಬರೂ ಅರ್ಹರಿದ್ದಾರೆ. ವಿಪಕ್ಷ ನಾಯಕ ಯಾರಾಗಬೇಕು ಎಂಬುವುದನ್ನು ಹೈಕಮಾಂಡ್ ನಿರ್ಣಯ ಮಾಡಲಿದೆ. ರಾಜ್ಯದ ಕೆಲ ಪ್ರದೇಶಗಳು ಪ್ರವಾಹ, ಬರಕ್ಕೆ ತುತ್ತಾಗಿವೆ. ಅಧಿವೇಶನದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಸಮಸ್ಯೆಗಳನ್ನು ಎತ್ತಿಕೊ0ಡು ಚರ್ಚಿಸುತ್ತೇವೆ. ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುವಂತೆ ನಾವೂ ಆಗ್ರಹ ಮಾಡಿದ್ದೇವೆ. ಆದರೆ ಪ್ರವಾಹ ಪುನರ್ವಸತಿ ಕಾರ್ಯ ಸರಿಯಾಗಿ ಆಗಿಲ್ಲ ಎಂಬುದು ಬಿಜೆಪಿಯವರಿಗೆ ಅರಿವಾಗಿದೆ. ಹೀಗಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿಲ್ಲ ಎಂಬುದು ನನ್ನ ಅನುಮಾನವಾಗಿದೆ ಎಂದು ತಿಳಿಸಿದರು.