ಬೆಂಗಳೂರು: ಟಗರು ಸಿನಿಮಾದ ಸೂಪರ್ ಹಿಟ್ ಸಕ್ಸಸ್ ಬಳಿಕ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಕವಚ’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಶಿವಣ್ಣ ಅಭಿನಯದ ಮತ್ತೊಂದು ಚಿತ್ರಕ್ಕೆ ತೆರೆಮರೆಯಲ್ಲಿ ಜೋರಾದ ತಯಾರಿ ನಡೆಯುತ್ತಿದೆ ಅದರ ಹೆಸರು ‘ರುಸ್ತುಂ’. ಹೌದು, ಶಿವರಾಜಕುಮಾರ್ ಅಭಿನಯದ ಮತ್ತೊಂದು ನಿರೀಕ್ಷಿತ ಚಿತ್ರ ‘ರುಸ್ತುಂ’ ಪ್ರಿ-ಪ್ರೋಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿದೆ. ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕರಾಗಿ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡುತ್ತಿದ್ದಾರೆ.
ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಸ್ಟಂಟ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದ ರವಿವರ್ಮಾ ಈ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಶಿವಣ್ಣ ಅಭಿನಯದ ರುಸ್ತುಂ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರತಂಡದ ಮೂಲಗಳ ಪ್ರಕಾರ ಈಗಾಗಲೇ ‘ರುಸ್ತುಂ’ನ ಬಹುತೇಕ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರೀಕರಣಕ್ಕೆ ಚಾಲನೆ ನೀಡುವುದೊಂದೇ ಬಾಕಿಯಿದೆ. ಮುಂದಿನ ಏಪ್ರಿಲ್ 24ರಂದು ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದು ಚಿತ್ರೀಕರಣಕ್ಕೆ ಚಾಲನೆ ನೀಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ಇನ್ನು ‘ರುಸ್ತುಂ’ ಸಿನಿಮಾದಲ್ಲಿ ಯೂ ಟರ್ನ್ ನಾಯಕಿ ಶ್ರದ್ಧಾ ಶ್ರೀನಾಥ್ ಶಿವಣ್ಣಗೆ ಹೀರೋಯಿನ್ ಆಗಿ ನಟಿಸಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ‘ರುಸ್ತುಂ’ ಸಿನಿಮಾ ಕಥೆ ಕೇಳಿ, ಶ್ರದ್ಧಾ ಕೂಡ ಶಿವಣ್ಣ ಜೊತೆ ಅಭಿನಯಿಸಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಸಿಂಪಲ್ ಸುನಿ ನಿರ್ದೇಶನದ ‘ಆಪರೇಷನ್ ಅಲಮೇಲಮ್ಮ’ ನಂತರ ಶ್ರದ್ಧಾ ಶ್ರೀನಾಥ್ ಯಾವುದೇ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಸದ್ಯಕ್ಕೆ ತಮಿಳು ಮತ್ತು ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸುತ್ತಿರುವ ಶ್ರದ್ಧಾಗೆ ಕನ್ನಡದಲ್ಲಿ ಬೇರೆ ಯಾವುದೇ ಸ್ಟಾರ್ ಸಿನಿಮಾಗಳಿಲ್ಲ. ಹಾಗಾಗಿ ಕನ್ನಡದಲ್ಲಿ ದೊಡ್ಡ ಸಿನಿಮಾಕ್ಕೆ ಎದುರು ನೋಡುತ್ತಿರುವ ಶ್ರದ್ಧಾ ಈ ಸಿನಿಮಾ ಒಪ್ಪಿಕೊಂಡು ಶಿವಣ್ಣ ಅವರಿಗೆ ಸಿನಿಮಾದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದು ಸಿನಿಮಾ ಮಂದಿಯ ಲೆಕ್ಕಾಚಾರ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವ ಶ್ರದ್ಧಾ ಒಂದಷ್ಟು ಕುತೂಹಲವನ್ನು ಹಾಗೆ ಉಳಿಸಿಕೊಂಡಿದ್ದಾರೆ.
ಇವೆಲ್ಲದರ ಜೊತೆಗೆ ‘ರುಸ್ತುಂ’ಗೆ ಖಳ ನಟರಾಗಿ ಬೇರೆ ಭಾಷೆಯಿಂದ ಖ್ಯಾತ ಕಲಾವಿದರನ್ನು ಕರೆತರುವ ಬಗ್ಗೆಯೂ ಚಿತ್ರತಂಡ ಯೋಚಿಸುತ್ತಿದೆ. ಈಗಾಗಲೇ ‘ರುಸ್ತುಂ’ನಲ್ಲಿ ಬಣ್ಣ ಹಚ್ಚುವಂತೆ ಅನಿಲ್ ಕುಮಾರ್, ಮನೋಜ್ ಬಾಜಪೇಯಿ, ಸಂಜಯ್ ದತ್, ಸುನೀಲ್ ಶೆಟ್ಟಿ ಅವರನ್ನು ಒಪ್ಪಿಸಲು ನಿರ್ದೇಶಕ ರವಿ ವರ್ಮಾ ಮತ್ತು ಚಿತ್ರತಂಡ ಪ್ರಯತ್ನಿಸುತ್ತಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.