ಬೆಂಗಳೂರು : 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ನೀಟ್ ನಿಂದ ಕರ್ನಾಟಕ ಹೊರಬರಲು ವಿಧಾನಮಂಡಲದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರ ನೀಟ್ ಅನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ನೀಟ್ ಬಂದ ಮೇಲೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಅನ್ಯಾಯ ಆಗಿದೆ. ಆದರೂ ಸರಕಾರ ವಿದ್ಯಾರ್ಥಿಗಳ ಆರ್ತನಾದ ಕೇಳುತ್ತಿಲ್ಲ ಎಂದರೆ ಸಚಿವರು ಮತ್ತು ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ಕಿಡಿಕಾರಿದರು.
Advertisement
ನೀಟ್ ವಿರುದ್ಧ ಮಾತನಾಡಿದವರು ಧನದಾಹಿಗಳು ಹಾಗೂ ದೇಶ ದ್ರೋಹಿಗಳು ಎಂದಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಹಾಗೂ ವೈದ್ಯ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋದ ವಿದ್ಯಾರ್ಥಿಗಳೆಲ್ಲರೂ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಫೇಲಾದವರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿರುವುದು ಅಕ್ಷಮ್ಯ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೆ ಹಾಕಿ ಎಂದಿದ್ದ ಚೀನಾ!
Advertisement
Advertisement
ನಾನು ಅಶ್ವಥ್ ನಾರಾಯಣ ಅವರಿಗೆ ಕೇಳಲು ಬಯಸುತ್ತೇನೆ. ಮಕ್ಕಳು ಇರಲಿ, ಈಗ ಪಿಯುಸಿ ಪಾಠ ಮಾಡುತ್ತಿರುವ ಉಪನ್ಯಾಸಕರಿಂದ ಈಗಿನ ನೀಟ್ ಪರೀಕ್ಷೆ ಬರೆಸಿ. ಅವರಲ್ಲಿ ಎಷ್ಟು ಜನ ಪಾಸಾಗುತ್ತಾರೋ ನೋಡೋಣ. ಇನ್ನು, ನೀಟ್ ಪ್ರಶ್ನೆ ಪತ್ರಿಕೆಯಲ್ಲಿ ವೈದ್ಯ ಶಿಕ್ಷಣಕ್ಕೆ ಪೂರಕವಾದ ಪ್ರಶ್ನೆಗಳೇ ಇರುವುದಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಕೆಲಸಕ್ಕೆ ಬಾರದ ಬೇರೆ ಬೇರೆ ವಿಷಯದ ಪ್ರಶ್ನೆಗಳಿರುತ್ತವೆ. ಎಂಸಿಕ್ಯೂ ಪ್ರಶ್ನೆಗಳಲ್ಲಿ ನೆಗೆಟೀವ್ ಅಂಕ ಬೇರೆ ಇರುತ್ತದೆ. ಇಂಥ ಕೆಟ್ಟ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳು ಸಿಲುಕಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
Advertisement
ಲೋಕಸಭೆ ಸ್ಪೀಕರ್ ಅವರ ಕ್ಷೇತ್ರದಲ್ಲಿ ನೀಟ್ ಟ್ಯೂಷನ್ ಅಂಗಡಿಗಳು ನಾಯಿಕೊಡೆಗಳಂತೆ ಮೇಲೆದ್ದಿವೆ. ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದಾರೆ. ಉತ್ತರ ಭಾರತದ ಟ್ಯೂಷನ್ ಮಾಫಿಯಾ ನೀಟ್ ಹಿಂದೆ ಇದೆ ಎನ್ನುವ ಅನುಮಾನವಿದೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?
ನೀಟ್ ಕೋಚಿಂಗ್ ಗೆ 2 ಲಕ್ಷ ಏಳೆಂಟು ವಿದ್ಯಾರ್ಥಿಗಳು ನನ್ನ ಬಳಿಗೆ ಬಂದು, ನೀಟ್ ಕೋಚಿಂಗ್ ಗೆ ಸೇರಬೇಕು. ನಾವು ಬಡವರು, 2 ಲಕ್ಷ ರೂಪಾಯಿ ಫೀಸ್ ಕಟ್ಟಬೇಕು. ಸಹಾಯ ಮಾಡಿ ಎಂದು ಕೇಳಿದ್ದಾರೆ. ಅವರಿಗೆ ಸಚಿವ ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಲು ಆಗಿಲ್ಲ. ಬರೀ ಕೋಚಿಂಗ್ ತೆಗೆದುಕೊಳ್ಳಲಿಕ್ಕೇ 2 ಲಕ್ಷ ಬೇಕಾದರೆ, ಇನ್ನೂ ಇಡೀ ಮೆಡಿಕಲ್ ಕೋರ್ಸ್ ಮುಗಿಸಲಿಕ್ಕೆ ಎಷ್ಟು ಲಕ್ಷ ರೂಪಾಯಿ ಬೇಕು? ಬಡ ಮಕ್ಕಳು ಇಷ್ಟು ಖರ್ಚು ಮಾಡಲು ಸಾಧ್ಯವೇ? ಸತ್ಯ ಹೀಗಿರುವಾಗ ವಿದೇಶಕ್ಕೆ ಹೋದ ಮಕ್ಕಳ ಬಗ್ಗೆ ಲಘುವಾಗಿ ಮಾತನಾಡುವುದು, ನೀಟ್ ವ್ಯವಸ್ಥೆ ಪ್ರಶ್ನಿಸಿದವರನ್ನು ದ್ರೋಹಿಗಳು ಎನ್ನುವುದು ಸರಿಯಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಎಷ್ಟು ವೈದ್ಯ ಕಾಲೇಜುಗಳಿವೆ, ಅವುಗಳನ್ನು ನಡೆಸುವವರ ಹಿನ್ನೆಲೆ ಏನು? ಸರ್ಕಾರಿ ಕಾಲೇಜುಗಳು ಎಷ್ಟಿವೆ? ಅವುಗಳಲ್ಲಿ ರಾಜ್ಯದ ಎಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ? ಎನ್ನುವುದನ್ನು ಸರಕಾರ ಹೇಳಬೇಕು. ನಮ್ಮ ಜನರ ತೆರಿಗೆ ಹಣದಲ್ಲಿ ಕಟ್ಟಿದ ಕಾಲೇಜುಗಳಲ್ಲಿ ನೀಟ್ ಪಾಸಾದವರಿಗೆ ಸೀಟು ಕೊಡುತ್ತಾರೆ. ಪಿಯುಸಿಯಲ್ಲಿ 97% ಅಂಕ ಪಡೆದ ನವೀನ್ ಅಂಥವರಿಗೆ ಸೀಟು ಸಿಗಲ್ಲ. ಈ ಕಾರಣಕ್ಕಾಗಿಯೇ ತಮಿಳುನಾಡಿನ ಸ್ಟಾಲಿನ್ ಅವರ ಸರ್ಕಾರ ನೀಟ್ ವಿರುದ್ಧ ಕೈಗೊಂಡ ಕ್ರಮವನ್ನು ಅಭಿನಂದಿಸುವೆ. ಅಲ್ಲಿನ ವಿಧಾನಸಭೆಯಲ್ಲಿ ನೀಟ್ ವಿರುದ್ಧ ಅವಿರೋಧ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ರಾಜ್ಯದ ಮಕ್ಕಳು ವೈದ್ಯ ಶಿಕ್ಷಣ ಪಡೆಯಲು ಯುಕ್ರೇನ್ , ರಷ್ಯಾ ಅಥವಾ ಫಿಲಿಪ್ಪೀನ್ಸ್ ಗೆ ಹೋಗಬೇಕು. ಏಕೆಂದರೆ ರಾಜ್ಯದಲ್ಲಿ ಮೆಡಿಕಲ್ ಮುಗಿಸಲು ಒಂದೂವರೆ ಕೋಟಿ ರೂಪಾಯಿ ಕಟ್ಟಬೇಕು. ನೀಟ್ ಮೂಲಕ ಅರ್ಹತೆ ಪಡೆದವರೂ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕಾದರೆ ಇಷ್ಟು ಹಣ ತೆರಬೇಕು. ವರ್ಷಕ್ಕೆ 38 ಲಕ್ಷ ರೂಪಾಯಿ ಕಟ್ಟಲೇಬೇಕು. ಬರೀ ಐದು ವರ್ಷದ ಶುಲ್ಕಕ್ಕೆ 1.50ಯಿಂದ 1.75 ಕೋಟಿ ರೂಪಾಯಿ ಬೇಕು. ಬಡ, ಮಾಧ್ಯಮ ವರ್ಗದ ಮಕ್ಕಳಿಗೆ ಇಷ್ಟು ಹಣ ಹೊಂದಿಸಲು ಸಾಧ್ಯವೇ? ಹಾಗಾದರೆ ಆ ಮಕ್ಕಳು ಮೆಡಿಕಲ್ ವ್ಯಾಸಂಗ ಮಾಡಲೇಬಾರದೇ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಇಂಥ ಕೆಟ್ಟ ವ್ಯವಸ್ಥೆ ಬಗ್ಗೆ ಮಾತನಾಡುವುದು ದೇಶ ದ್ರೋಹವೇ? ಇದನ್ನು ಉನ್ನತ ಶಿಕ್ಷಣ ಸಚಿವರನ್ನು ಕೇಳಲು ಬಯಸುತ್ತೇನೆ. ಹಾಗೆಯೇ ಪ್ರಹ್ಲಾದ್ ಜೋಷಿ ಹೇಳ್ತಾರೆ, ನಮ್ಮ ದೇಹದಲ್ಲಿ ನೀಟ್ ಫೇಲ್ ಆದವರೆಲ್ಲ ಉಕ್ರೇನ್ ಗೆ ಮೆಡಿಕಲ್ ಮಾಡಲಿಕ್ಕೆ ಹೋಗಿದಾರೆ ಎಂದು. 97% ಅಂಕ ಪಡೆದ ಆ ವಿದ್ಯಾರ್ಥಿಗೆ ಅಷ್ಟು ಅಂಕ ಬಿಟ್ಟಿ ಬಂದಿದೆಯಾ? ಸಾಲ ಸೋಲ ಮಾಡಿ ಮಾಡಿ ಅಲ್ಲಿಗೆ ಕಳಿಸಿ ಇವತ್ತು ಮಗನನ್ನು ಕಳೆದುಕೊಂಡ ಆ ಕುಟುಂಬ ಇವತ್ತು ದುಃಖದಲ್ಲಿದೆ. ಇಂಥ ಹೇಳಿಕೆ ನೀಡುವ ಸಚಿವರಿಗೆ ಜವಾಬ್ದಾರಿ ಬೇಡವೇ? ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರತಿಕ್ರಿಯಿಸಿದರು.