ಮಾಸ್ಕೋ: ಉಕ್ರೇನ್ (Ukraine ) ವಿರುದ್ಧ ದಾಳಿ ನಡೆಸುತ್ತಿರುವ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಆಪ್ತನೇ ಈಗ ರಷ್ಯಾ ಸೇನೆ ವಿರುದ್ಧ ಬಂಡಾಯ ಏಳುವ ಮೂಲಕ ಶಾಕ್ ನೀಡಿದ್ದಾನೆ.
ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ (Wagner) ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದಿದ್ದು, ದಾಳಿಯ ಎಚ್ಚರಿಕೆ ನೀಡಿದೆ.
ತನ್ನ ಸೇನೆಯ ಮೇಲೆಯೇ ದಾಳಿ ಮಾಡುತ್ತಿರುವ ರಷ್ಯಾ ಸೇನೆಯ ವಿರುದ್ಧ ದಾಳಿ ನಡೆಸುತ್ತೇನೆ. ರಷ್ಯಾ ಸೇನಾ ನಾಯಕತ್ವವನ್ನೇ ಅಂತ್ಯಗೊಳಿಸಲು ಯಾವುದೇ ಕ್ರಮಕ್ಕೂ ನಾನು ಸಿದ್ಧನಿದ್ದೇನೆ ಎಂದು ಯೆವ್ಗೆನಿ ಪ್ರಿಗೋಜಿನ್ ಶಪಥ ಮಾಡಿದ್ದಾನೆ. ಇದನ್ನೂ ಓದಿ: ಭಾರತದ ರಾಷ್ಟ್ರಗೀತೆ ಹಾಡಿ ಮೋದಿ ಆಶೀರ್ವಾದ ಪಡೆದ ಅಮೆರಿಕ ಗಾಯಕಿ
ವ್ಯಾಗ್ನರ್ ಪಡೆ ಎಂದರೇನು?
ವ್ಯಾಗ್ನರ್ ಪಡೆ (Wagner Mercenary) ಎಂಬುದು ಒಂದು ಖಾಸಗಿ ಸೇನೆಯಾಗಿದ್ದು, ಇದನ್ನು ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯಲಾಗುತ್ತದೆ. ಪುಟಿನ್ ಆಪ್ತ ಪ್ರಿಗೋಜಿನ್ ಈ ಪಡೆಯ ಮುಖ್ಯಸ್ಥನಾಗಿದ್ದಾನೆ. ಇದು ಕಾನೂನು ಬಾಹಿರ ಸೇನಾ ಪಡೆಯಾಗಿದ್ದರೂ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದಂತೆ ಕೆಲಸ ಮಾಡುತ್ತಿದೆ. ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿ ಪಡೆಗಳನ್ನು ಬೆಂಬಲಿಸುತ್ತಿದ್ದಾಗ 2014ರಲ್ಲಿ ಮೊದಲ ಬಾರಿಗೆ ಈ ರೀತಿಯ ಪಡೆ ಇದೆ ಎನ್ನುವುದು ಪ್ರಪಂಚಕ್ಕೆ ಗೊತ್ತಾಯಿತು. ಒಟ್ಟು 50 ಸಾವಿರ ಸೈನಿಕರು ಈ ಪಡೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ತಿರುಗಿ ಬಿದ್ದಿದ್ದು ಯಾಕೆ?
ಈ ವರ್ಷದ ಜನವರಿಯಲ್ಲಿ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಉಪ್ಪು ತಯಾರಿಸುವ ಪಟ್ಟಣವಾದ ಸೊಲೆಡಾರ್ ಅನ್ನು ರಷ್ಯಾ ವಶಪಡಿಸಿಕೊಂಡಿತ್ತು. ಈ ಪ್ರದೇಶವನ್ನು ಗೆದ್ದ ಶ್ರೇಯಸ್ಸು ವಿಚಾರವಾಗಿ ವ್ಯಾಗ್ನರ್ ಪಡೆ ಮತ್ತು ರಷ್ಯಾ ಸೇನೆಯ ಬಗ್ಗೆ ಕಿತ್ತಾಟ ನಡೆಯುತ್ತಿತ್ತು. ಯೆವ್ಗೆನಿ ಪ್ರಿಗೋಜಿನ್ ಇದರ ಕ್ರೆಡಿಟ್ ನಮಗೆ ಸಿಗಬೇಕು ಎಂದು ಹೇಳಿದ್ದ.
ನಂತರದ ದಿನಗಳಲ್ಲಿ ರಷ್ಯಾ ಸೇನೆ ನಮಗೆ ಸರಿಯಾಗಿ ಮದ್ದುಗುಂಡುಗಳನ್ನು ಪೂರೈಸುತ್ತಿಲ್ಲ ಎಂದು ಕಿಡಿಕಾರಿದ್ದ. ಅಷ್ಟೇ ಅಲ್ಲದೇ ರಷ್ಯಾದ ಮಿಲಿಟರಿ ನಾಯಕರು ಸರಿಯಾಗಿ ಸೇನೆಯನ್ನು ಮುನ್ನಡೆಸುತ್ತಿಲ್ಲ ಎಂದು ದೂರಿದ್ದ. ಮಿಲಿಟರಿ ನಾಯಕರ ಕುರಿತಾಗಿ ಈತನ ಹೇಳಿಕೆಯ ಬಗ್ಗೆ ತಿಳಿದಿದ್ದರೂ ಪುಟಿನ್ ತಲೆಕೆಡಿಸಿಕೊಂಡಿರಲಿಲ್ಲ. ಈ ಕಿತ್ತಾಟ ಜಾಸ್ತಿ ಆಗಿದ್ದು, ಇಂದು ರಷ್ಯಾ ಸೇನೆ ತನ್ನ ಪಡೆಗಳನ್ನು ಗುರಿಯಾಗಿಸಿ ಮಾರಣಾಂತಿಕ ಕ್ಷಿಪಣಿ ದಾಳಿ ಮಾಡಿದ್ದಕ್ಕೆ ಯೆವ್ಗೆನಿ ಪ್ರಿಗೋಜಿನ್ ಸಿಟ್ಟಾಗಿ ದಾಳಿ ಮಾಡಿ ರಷ್ಯಾ ಸೇನಾ ಮುಖ್ಯಸ್ಥರನ್ನು ಕೆಳಗೆ ಇಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.
ಈಗ ರಷ್ಯಾದಲ್ಲಿ ಏನಾಗುತ್ತಿದೆ?
ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಪ್ರಿಗೋಜಿನ್ ಮಾಸ್ಕೋ ನಾಯಕತ್ವವನ್ನು ಉರುಳಿಸುವುದಾಗಿ ಪ್ರತಿಜ್ಞೆ ಮಾಡಿದ ನಂತರ ರಾಜಧಾನಿ ಮಾಸ್ಕೋ ಸೇರಿದಂತೆ ರಷ್ಯಾದ ಹಲವಾರು ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದಕ್ಷಿಣ ರಷ್ಯಾದಲ್ಲಿರುವ ರೋಸ್ಟೊವ್ ಮತ್ತು ಲಿಪೆಟ್ಕ್ಸ್‌ನಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ರೋಸ್ಟೊವ್‌ನಲ್ಲಿ ಮನೆಗಳಿಂದ ಹೊರಬರಬೇಡಿ ಎಂದು ಜನರಲ್ಲಿ ರಷ್ಯಾ ಅಧಿಕಾರಿಗಳು ಕೇಳಿದ್ದಾರೆ.