ಮಾಸ್ಕೋ: ಕಾಲುಕೆರೆದು ಕದನಕ್ಕೆ ಸಜ್ಜಾಗಿರುವ ರಷ್ಯಾ, ಇದೀಗ ಉಕ್ರೇನ್ ದೇಶವನ್ನು ಮೂರು ಭಾಗ ಮಾಡಿ ಘೋಷಣೆ ಹೊರಡಿಸಿದೆ.
ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ನಿಯಂತ್ರಣದಲ್ಲಿರುವ ದೋನೆಟ್ಸ್‍ಕೋ, ಲುಹಾನ್ಸ್‍ಕೋ ಪ್ರಾಂತ್ಯಗಳನ್ನು ಎರಡು ಪ್ರತ್ಯೇಕ ದೇಶಗಳೆಂದು ಗುರುತಿಸಿ ಪುಟಿನ್ ಆದೇಶ ಹೊರಡಿಸಿದ್ದಾರೆ. ಹೊಸ ದೇಶಗಳಲ್ಲಿ ಶಾಂತಿ ಸ್ಥಾಪನೆ ಆಗುವವರೆಗೂ ರಷ್ಯಾದ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸಲು ತೀರ್ಮಾನಿಸಿದೆ. ಈ ಮೂಲಕ ಉಕ್ರೇನ್ ಅಸ್ತಿತ್ವವನ್ನೇ ಪ್ರಶ್ನಿಸಿ ಯುರೋಪ್ ದೇಶಗಳಿಗೆ ಪುಟಿನ್ ಭಯ ಹುಟ್ಟಿಸಿದ್ದಾರೆ.
ನಾವು ಶಾಂತಿಯನ್ನು ಬಯಸುತ್ತೇವೆ. ಒಂದಿಂಚೂ ಭಾಗವನ್ನು ಇತರರು ಆಕ್ರಮಿಸಲು ಬಿಡುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಸ್ಪಷ್ಟಪಡಿಸಿದ್ದಾರೆ. ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ರಷ್ಯಾ ನೋಡುತ್ತಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅಧ್ಯಕ್ಷ ಜೆಲೆನ್ ಸ್ಕೀ ಗುಡುಗಿದ್ದಾರೆ. ಇದನ್ನೂ ಓದಿ: ಉಕ್ರೇನ್ ಉದ್ವಿಗ್ನತೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಆತಂಕ
ರಷ್ಯಾದ ನಡೆ ಬಗ್ಗೆ ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ರಷ್ಯಾ ಕ್ರಮವನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ, ಆಸ್ಟ್ರೇಲಿಯಾ ತೀವ್ರವಾಗಿ ಖಂಡಿಸಿವೆ. ಉಕ್ರೇನ್‍ನಿಂದ ಬೇರ್ಪಟ್ಟ 2 ಪ್ರಾಂತ್ಯಗಳಿಗೆ ಆರ್ಥಿಕ ನಿರ್ಬಂಧ ಹೇರಿ ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟದ ಹಲವು ದೇಶಗಳು ಶಾಕ್ ನೀಡಿವೆ.
ಸರಕು, ಸೇವೆ, ತಂತ್ರಜ್ಞಾನಗಳನ್ನು ಯಾವುದೇ ರೂಪದಲ್ಲಿಯೂ ಸರಬರಾಜು ಮಾಡಬಾರದೆಂದು ನಿರ್ಧರಿಸಿದೆ. ರಷ್ಯಾ ಮೇಲೆಯೂ ಕಠಿಣ ನಿರ್ಬಂಧಕ್ಕೆ ಅಮೆರಿಕಾ ಚಿಂತನೆ ನಡೆಸಿದೆ. ಈ ಮಧ್ಯೆ ಉಕ್ರೇನ್ ವಿಚಾರದಲ್ಲಿ ಎಲ್ಲಾ ದೇಶಗಳು ಸಂಯಮ ಪಾಲಿಸಬೇಕೆಂದು ಭಾರತ ಕರೆ ನೀಡಿದೆ. ಇದನ್ನೂ ಓದಿ: ಉಕ್ರೇನ್ ತೊರೆಯಿರಿ – ವಿದ್ಯಾರ್ಥಿಗಳಿಗೆ ಭಾರತ ಸಲಹೆ
ಯಾವುದೇ ಕ್ಷಣದಲ್ಲಿ ಯುದ್ಧ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ, ಈ ಕೂಡಲೇ ಉಕ್ರೇನ್ ತೊರೆಯುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಉಕ್ರೇನ್‍ನಲ್ಲಿರುವ ಭಾರತೀಯರನ್ನು ಕರೆತರಲು ಇಂದು ಬೆಳಗ್ಗೆ ಏರ್ ಇಂಡಿಯಾ ವಿಮಾನವೊಂದು ದೆಹಲಿಯಲ್ಲಿ ಟೇಕ್ ಆಫ್ ಆಗಿದೆ. ಇನ್ನಷ್ಟು ವಿಮಾನಗಳನ್ನು ಕಳಿಸುವುದಾಗಿ ತಿಳಿಸಿದೆ.