ಬೆಂಗಳೂರು: ನಗರದ ಮತ್ತೊಂದು ಪ್ರತಿಸ್ಠಿತ ಕ್ಲಬ್ ಮೇಲೆ ಆಹಾರ ಸುರಕ್ಷತಾ ಇಲಾಖೆ (FDA) ದಾಳಿ ನಡೆಸಿದ ವೇಳೆ ಅವಧಿ ಮುಗಿದ ತರಕಾರಿ, ಆರ್ಟಿಫಿಷಿಯಲ್ ಕಲರ್ ಬಳಕೆ ಸೇರಿದಂತೆ ಹಲವು ನಿಯಮಗಳು ಉಲ್ಲಂಘನೆಯಾಗಿರುವುದು ಕಂಡುಬಂದಿದೆ.
ಬೆಂಗಳೂರಿನ ಎಫ್‌ಡಿಎ ಡಾಲರ್ಸ್ ಕಾಲೋನಿಯ ಚೇರ್ಮನ್ ಕ್ಲಬ್ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಆಹಾರ ತಯಾರಿಕೆಯಲ್ಲಿ ಮಾಡಿರುವ ಸಾಲು ಸಾಲು ಅವಾಂತರಗಳು ಬಯಲಾಗಿವೆ.
ಕ್ಲಬ್‌ನಲ್ಲಿ ಅವಧಿ ಮೀರಿದ ತರಕಾರಿ, ಅನುಮತಿ ಇಲ್ಲದ ಕೃತಕ ಬಣ್ಣಗಳನ್ನ ಬಳಸಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ ಸಸ್ಯಾಹಾರ, ಮಾಂಸಾಹಾರ ಪದಾರ್ಥಗಳನ್ನು ಒಂದೇ ಕಡೆ ಸಂಗ್ರಹ ಮಾಡಲಾಗಿದೆ. ಸಾಲದ್ದಕ್ಕೆ ಶುಚಿತ್ವ ಕೊರತೆಯಿಂದ ಕಿಚನ್‌ನಲ್ಲಿ ಜಿರಳೆಗಳು ಸಹ ಓಡಾಡುತ್ತಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ.

ಸರಿಯಾಗಿ ನಿಯಮ ಪಾಲನೆ ಮಾಡದೇ ಇರೋದಕ್ಕೆ ಅಧಿಕಾರಿಗಳು ಕ್ಲಬ್‌ನ ಅಡುಗೆ ಮನೆ ಸೀಲ್ ಮಾಡಿದ್ದಾರೆ. ಮಾಲೀಕರಿಗೆ ನೋಟೀಸ್ ನೀಡಿ, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ದಾಳಿ ವೇಳೆ ಏನೆಲ್ಲ ಉಲ್ಲಂಘನೆ ಪತ್ತೆ…?
– ಅವಧಿ ಮೀರಿದ 40 ಕೆ.ಜಿ. ಮೆಣಸಿನಕಾಯಿ ಸಂಗ್ರಹ.
– 5 ಕೆ.ಜಿ. ಬ್ರೆಡ್ ಕ್ರಮ್ಸ್ ಹಾಗೂ 2 ಕೆ.ಜಿ. ಸಜೀರಾ ಆಹಾರ ಪದಾರ್ಥಗಳಿಗೆ ಎಫ್.ಎಸ್.ಎಸ್.ಎ.ಐ ನಿಯಮಾವಳಿಗಳಿಗೆ ಅನುಗುಣವಾಗಿರದ ಲೇಬಲಿಂಗ್.
– ಆಹಾರ ತಯಾರಿಕಾ ಮತ್ತು ಸಂಗ್ರಹಣಾ ಪ್ರದೇಶಗಳಲ್ಲಿ ಅತ್ಯಂತ ಅನೈರ್ಮಲ್ಯಕರ ಪರಿಸ್ಥಿತಿ.
– ಆಹಾರ ಪದಾರ್ಥಗಳಲ್ಲಿ ಅನುಮತಿಸದ/ನಿಯಮಬಾಹಿರ ಕೃತಕ ಬಣ್ಣಗಳ ಬಳಕೆ ಅಥವಾ ಸಂಗ್ರಹಣೆ.
– ಆಹಾರ ಪದಾರ್ಥಗಳ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ಅಗತ್ಯ ಆಹಾರ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು.
– ಸಸ್ಯಹಾರಿ ಹಾಗೂ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಒಟ್ಟಿಗೆ ಸಂಗ್ರಹಣೆ.
– ಅಡುಗೆಮನೆಯಲ್ಲಿ ಜಿರಳೆ ಪತ್ತೆಯಾಗಿರುವುದು.
