ಬೆಂಗಳೂರು: ಸಿಲಿಕಾನ್ ಸಿಟಿಯ ಜೆಪಿ ನಗರ ಅಂದರೆ ಆಫೀಷಿಯಲ್ ಏರಿಯಾ, ಅಲ್ಲೇಲ್ಲಾ ದೊಡ್ಡ ದೊಡ್ಡ ಮನೆಗಳೇ ಇರೋದು ಎಂದು ಜನ ಹೇಳುತ್ತಾರೆ. ಆದರೆ ಇಂತಹ ಏರಿಯಾದಲ್ಲೇ ರಸ್ತೆ ಮೇಲೆ ಮೋರಿ ನೀರು ಬಂದು ನಿಲ್ಲುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ಬಿಬಿಎಂಪಿ, ಕಾರ್ಪೊರೇಟರ್‌ಗಳು ಮಾತ್ರ ಕ್ಯಾರೇ ಅಂತಿಲ್ಲ.
ಹೌದು. ಜೆಪಿ ನಗರದಲ್ಲಿ ಕಳೆದ ಒಂದು ತಿಂಗಳಿಂದ ರಸ್ತೆನಲ್ಲೇ ಒಳಚರಂಡಿ ನೀರು ಸರಾಗವಾಗಿ ಹರಿಯುತ್ತಿದೆ. ಒಳಚರಂಡಿ ಬ್ಲಾಕ್ ಆಗಿದ್ದು, ಅದರ ಕೊಳಚೆ ನೀರೆಲ್ಲಾ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಅಲ್ಲಿರುವ ನಿವಾಸಿಗಳು ಮನೆಯಿಂದ ಹೊರಬರಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಕಾರ್ಪೊರೇಟರ್ ಹಾಗೂ ಬಿಬಿಎಂಪಿ, ಜಲಮಂಡಳಿಯವರಿಗೆ ಅಷ್ಟೇ ದೂರು ನೀಡಿದರು ಯಾರೂ ತಲೆ ಕೆಡಿಸಿಕೊಂಡಿಲ್ಲ. ಅಧಿಕಾರಿಗಳು, ಕಾರ್ಪೊರೇಟರ್‌ಗಳ ಬೇಜವಾಬ್ದಾರಿಗೆ ಅಲ್ಲಿನ ಜನ ಬೇಸತ್ತು ಹೋಗಿದ್ದಾರೆ.
ಕೆಟ್ಟ ವಾಸನೆ, ಕ್ರೀಮಿಕೀಟಗಳ ಜೊತೆಗೆ ಸೊಳ್ಳೆಗಳ ಸಂಖ್ಯೆಯೂ ಪ್ರದೇಶದಲ್ಲಿ ಹೆಚ್ಚಾಗಿದೆ. ಇದು ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಷ್ಟೆಲ್ಲಾ ಆದರೂ ಯಾರೂ ನಮ್ಮ ಸಮಸ್ಯೆಯನ್ನ ಸರಿಪಡಿಸೋ ಕೆಲಸಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶಗೊಂಡಿದ್ದಾರೆ.