ಬೆಂಗಳೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ತರಕಾರಿ ಬೆಲೆ ಏರಿಕೆಯ ನಡುವೆಯೇ ಇದೀಗ ಅಕ್ಕಿ ಬೆಲೆ(Rice price)ಯೂ ಹೆಚ್ಚಳವಾಗಿದೆ.
ವಿವಿಧ ತಳಿಯ ಅಕ್ಕಿ ದರದಲ್ಲಿ ಕೆ.ಜಿಗೆ 10 ರಿಂದ 20 ರೂಪಾಯಿವರೆಗೆ ಏರಿಕೆಯಾಗಿದ್ದು, ಇದರಿಂದ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಂತಾಗಿದೆ.
ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಇದರ ಜೊತೆಗೆ ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕಡಿಮೆಯಾಗಿದೆ. ಇದೇ ಕಾರಣದಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.
ಇನ್ನೂ ಹೊಸ ಅಕ್ಕಿ ಬೆಳೆ ನವೆಂಬರ್ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಅಕ್ಕಿ ಕೊರತೆ ಮುಂದುವರಿಯುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಅಬ್ಬರ – ಬೆಂಗಳೂರು ಸೇರಿ 19 ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ
ಪ್ರಸ್ತುತ ಸ್ಟೀಮ್ ರೈಸ್ ಕೆ.ಜಿಗೆ 42 ರೂಪಾಯಿಯಿಂದ 56 ರೂಪಾಯಿಗೆ ಏರಿಕೆಯಾಗಿದೆ. ರಾ ರೈಸ್ 50 ರೂಪಾಯಿಯಿಂದ 62 ರೂಪಾಯಿಗೆ ಹೆಚ್ಚಳವಾಗಿದೆ. ಕೋಲಂ ರೈಸ್ 68 ರೂಪಾಯಿಯಿಂದ 80 ರೂಪಾಯಿಗೆ ಜಿಗಿದರೆ, ಕೋಲಂ ಸ್ಟೀಮ್ ಅಕ್ಕಿ 55 ರೂಪಾಯಿಯಿಂದ 65 ರೂಪಾಯಿಗೆ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನರು, ಅಕ್ಕಿ ದರ ಹೆಚ್ಚಳದಿಂದ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ದಿನನಿತ್ಯದ ಖರ್ಚು ನಿಭಾಯಿಸುವುದೇ ಸವಾಲಾಗಿದೆ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಅಡುಗೆ ಎಣ್ಣೆ ಪ್ಯಾಕೆಟ್ ಗಾತ್ರ ನಿಗದಿ ಮಾಡಿದ ಕೇಂದ್ರ – ಇಷ್ಟ ಬಂದಂತೆ ಕಂಪನಿಗಳು ಎಣ್ಣೆ ಮಾರುವಂತಿಲ್ಲ
