ಬೆಂಗಳೂರು: ನಗರದ ಕೋಣನಕುಂಟೆ ಬಳಿಯ ಪಿಳ್ಳಗಾನಹಳ್ಳಿ ನೈಸ್ ರೋಡ್ ಬಳಿ ವ್ಯಕ್ತಿಯೊಬ್ಬನ ಮೇಲೆ ಫೈರಿಂಗ್ ಮಾಡಿರುವ ಘಟನೆ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಸಂಪಂಗಿ ಎಂಬಾತನಿಂದ ಫೈರಿಂಗ್ ನಡೆದಿದೆ. ಶ್ರಿನಿವಾಸ್ ಅಲಿಯಾಸ್ ಮೆಂಟಲ್ ಸೀನ ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ. ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಗುಂಡೇಟು ನೀಡಿರುವ ಶಂಕೆ ವ್ಯಕ್ತವಾಗಿದೆ.
ಸಂಪಂಗಿ ಬಳಿ ಶ್ರೀನಿವಾಸ್ ಕಾರು ಚಾಲಕನಾಗಿದ್ದ. ಕಳೆದ ವರ್ಷ ಸಂಪಂಗಿ ಬಳಿ ಡ್ರೈವಿಂಗ್ ಕೆಲಸ ಬಿಟ್ಟಿದ್ದ. ಇತ್ತೀಚೆಗೆ ರಿಯಲ್ ಎಸ್ಟೇಟ್ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿರುವ ಶ್ರೀನಿವಾಸ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿ ಸಂಪಂಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

