ಫಿಶ್ ಫ್ರೈನಂತೆ ರುಚಿಕರ ಬಾಳೆಕಾಯಿ ರವಾ ಫ್ರೈ ಮಾಡಿ

Public TV
2 Min Read
RAW BANANA FRY 2

ಫಿಶ್ ಫ್ರೈ  ಎಂದರೆ ನಾನ್‌ವೆಜ್ ಪ್ರಿಯರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಅದೇ ರುಚಿ ನೀಡುವ ಬಾಳೆಕಾಯಿ ರವಾ ಫ್ರೈ ಎಂದಾದರೂ ತಿಂದಿದ್ದೀರಾ? ತಿಂದಿಲ್ಲ ಅಂದ್ರೆ ಒಂದು ಸಲ ಟ್ರೈ ಮಾಡಿ ನೋಡಿ. ಅದರಲ್ಲೂ ಜಿಟಿ ಜಿಟಿ ಮಳೆ ಬಂದಾಗ ಚಹಾದ ಜೊತೆ ಬಿಸಿ ಬಿಸಿಯಾಗಿ ಇದನ್ನು ತಿನ್ನುವ ಮಜವೇ ಬೇರೆ. ಹಾಗಿದ್ದರೆ ಇದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಟ್ರೈ ಮಾಡಿ ಕ್ರಿಸ್ಪಿ ಪೋಹಾ ಕಟ್ಲೆಟ್..

RAW BANANA FRY 1

ಬೇಕಾಗುವ ಸಾಮಾಗ್ರಿಗಳು:
ಬಾಳೆಕಾಯಿ – 2
ಅಚ್ಚಖಾರದ ಪುಡಿ – 2 ಚಮಚ
ದನಿಯಾ ಪುಡಿ – ಅರ್ಧ ಚಮಚ
ಅರಶಿಣ ಪುಡಿ – ಕಾಲು ಚಮಚ
ಗರಂ ಮಸಾಲ – ಕಾಲು ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ನಿಂಬೆ ರಸ – ಒಂದು ಚಮಚ
ಅಕ್ಕಿ ಹಿಟ್ಟು – ಅರ್ಧ ಚಮಚ
ನೀರು – ಅಗತ್ಯಕ್ಕೆ ತಕ್ಕಷ್ಟು
ಚಿರೋಟಿ ರವೆ – 1 ಕಪ್
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – 5ರಿಂದ 6 ಚಮಚ

RAW BANANA FRY

ಮಾಡುವ ವಿಧಾನ:

  • ಮೊದಲಿಗೆ ಬಾಳೆಕಾಯಿಯ ಸಿಪ್ಪೆಯನ್ನು ತೆಗೆದು ಉದ್ದುದ್ದವಾಗಿ ಹಚ್ಚಿಕೊಳ್ಳಿ. ಇದನ್ನು ತುಂಬಾ ತೆಳುವಾಗಿ ಹಚ್ಚಿಕೊಳ್ಳದೆ ಸ್ವಲ್ಪ ದಪ್ಪವಾಗಿಯೇ ಹೆಚ್ಚಿಕೊಂಡು ನೀರಿನಲ್ಲಿ ಹಾಕಿಟ್ಟುಕೊಳ್ಳಿ. ಬಾಳೆಕಾಯಿಯನ್ನು ನೀರಿನಲ್ಲಿ ಹಾಕಿಡುವುದರಿಂದ ಅದು ಕಪ್ಪಾಗುವುದಿಲ್ಲ.
  • ಬಳಿಕ ಒಂದು ಪ್ಲೇಟ್‌ಗೆ ಅಚ್ಚ ಖಾರದ ಪುಡಿ, ದನಿಯಾ ಪುಡಿ, ಅರಶಿಣ ಪುಡಿ, ಗರಂ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ, ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಗಂಟಾಗದಂತೆ ಗಟ್ಟಿಯಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ.
  • ನಂತರ ಒಂದೊಂದೆ ಬಾಳೆಕಾಯಿಗೆ ಎರಡೂ ಕಡೆ ಈ ಮಸಾಲೆಯನ್ನು ಹಚ್ಚಿಕೊಳ್ಳಿ. ಬಳಿಕ ಅದನ್ನು 20 ನಿಮಿಷಗಳ ಕಾಲ ಹಾಗೇ ಇಡಿ. ಇದರಿಂದ ಬಾಳೆಕಾಯಿ ಮಸಾಲೆಯನ್ನು ಚನ್ನಾಗಿ ಹೀರಿಕೊಳ್ಳುತ್ತದೆ.
  • ಬಳಿಕ ಇನ್ನೊಂದು ಪ್ಲೇಟ್‌ನಲ್ಲಿ ಒಂದು ಕಪ್ ಚಿರೋಟಿ ರವೆ ತೆಗೆದುಕೊಳ್ಳಿ. ಇದಕ್ಕೆ ಅರ್ಧ ಚಮಚದಷ್ಟು ಉಪ್ಪನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
  • ಒಂದು ಪ್ಯಾನ್‌ಗೆ 5ರಿಂದ 6 ಚಮಚದಷ್ಟು ಎಣ್ಣೆಯನ್ನು ಹಾಕಿಕೊಳ್ಳಿ. ಎಣ್ಣೆ ಚನ್ನಾಗಿ ಕಾದ ಬಳಿಕ ಬಾಳೆಕಾಯಿಗಳನ್ನು ಚಿರೋಟಿ ರವೆಯಲ್ಲಿ ಅದ್ದಿ ಎಣ್ಣೆಗೆ ಹಾಕಿಕೊಂಡು ಎರಡೂ ಕಡೆ ಚನ್ನಾಗಿ ಫ್ರೈ ಮಾಡಿಕೊಳ್ಳಿ. ಮೂರು ನಿಮಿಷಗಳವರೆಗೆ ಒಂದು ಸೈಡ್ ಫ್ರೈ ಮಾಡಿಕೊಂಡರೆ ಸಾಕು. ಹಾಗೆಯೇ ಇನ್ನೊಂದು ಬದಿಯನ್ನೂ ಫ್ರೈ ಮಾಡಿಕೊಳ್ಳಿ.
  • ಬಳಿಕ ಇದನ್ನು ಪ್ಯಾನ್‌ನಿಂದ ತೆಗೆದು ಪ್ಲೇಟ್‌ಗೆ ಹಾಕಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಬಿ ಬೈಟ್ಸ್

Share This Article