ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನಟಿಸಿದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಾಕಷ್ಟು ಹವಾ ಸೃಷ್ಟಿಸಿದೆ. ಹೀಗಿರುವಾಗ ರಕ್ಷಿತ್ ಅಭಿಮಾನಿಗಳು ನಟಿ ರಶ್ಮಿಕಾ ಮಂದಣ್ಣ ಅವರ ಪೋಸ್ಟ್ ಗೆ ಕಮೆಂಟ್ಗಳ ಸುರಿಮಳೆ ಗೈದಿದ್ದಾರೆ.
ರಶ್ಮಿಕಾ ಅವರು ಕೊನೆಯದಾಗಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಫೋಟೋಗೆ ರಕ್ಷಿತ್ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಹಲವರು ಅವನೇ ಶ್ರೀಮನ್ನಾರಾಯಣ ಟ್ರೈಲರ್ ನೋಡಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಹಳೆಯದನ್ನು ಮರೆತು ಟ್ರೈಲರ್ ನೋಡಿ ರಕ್ಷಿತ್ಗೆ ಶುಭ ಹಾರೈಸಿ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ‘ಎಲ್ರ ಗಮನ ನನ್ನ ಕಡೆ ಇದೆ ಅಂತ ಗೊತ್ತು, ಹಾಗೆ ಗಮನವಿಟ್ಟು ಕೇಳಿ’
ನವೆಂಬರ್ 28ರಂದು ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಟ್ರೈಲರ್ ಬಿಡುಗಡೆಯಾದ 18 ಗಂಟೆಗಳಲ್ಲಿ 69 ಲಕ್ಷಕ್ಕೂ ಹೆಚ್ಚು ವ್ಯೂವ್ ಪಡೆದಿದೆ. ಅಲ್ಲದೆ ಕಿಚ್ಚ ಸುದೀಪ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಈ ಟ್ರೈಲರ್ ನೋಡಿ ರಕ್ಷಿತ್ ಶೆಟ್ಟಿಗೆ ಶುಭ ಕೋರಿದ್ದಾರೆ.
ಅವನೇ ಶ್ರೀಮನ್ನಾರಾಯಣ 5 ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಇದೇ ಮೊದಲ ಬಾರಿಗೆ ನಟ ರಕ್ಷಿತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಜೋಡಿಯಾಗಿ ನಟಿ ಶಾನ್ವಿ ಶ್ರೀವಾಸ್ತವ್ ನಟಿಸಿದ್ದಾರೆ. ಈ ಸಿನಿಮಾವನ್ನು ಸಚಿನ್ ರವಿ ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್ 27ರಂದು ಸಿನಿಮಾ ಬಿಡುಗಡೆಯಾಗಲಿದೆ.
ರಕ್ಷಿತ್ ಶೆಟ್ಟಿ ಕೊನೆಯದಾಗಿ 2016ರಲ್ಲಿ ಬಿಡುಗಡೆಯಾದ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ನಟಿಸಿದ್ದರು. ಈಗ ಬರೋಬ್ಬರಿ ಮೂರು ವರ್ಷಗಳ ನಂತರ ರಕ್ಷಿತ್ ಶೆಟ್ಟಿ ಬೆಳ್ಳೆ ಪರದೆ ಮೇಲೆ ಮಿಂಚಲಿದ್ದಾರೆ. ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.