– ಸಿಎಂ, ಪರಮೇಶ್ವರ್ ಅವರದ್ದೂ ಸಿಡಿ ಬರಬಹುದು – ಬಾಂಬ್ ಸಿಡಿಸಿದ ಮಾಜಿ ಸಚಿವ
ಬೆಳಗಾವಿ: ಪ್ರಜ್ವಲ್ ರೇವಣ್ಣ ಕೇಸ್ (Prajwal Revanna Case) ಯಾರು ಹೆಮ್ಮೆ ಪಡುವ ವಿಷಯ ಅಲ್ಲ. ಎಲ್ಲರೂ ತಲೆ ತಗ್ಗಿಸುವ ವಿಷಯ, ಬಹಳ ಕೆಟ್ಟ ಪ್ರಮಾಣದಲ್ಲಿ ಆಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಅಸಮಾಧಾನ ಹೊರಹಾಕಿದ್ದಾರೆ.
ಮತ ಹಾಕುವ ಮುನ್ನ ಬೆಳಗಾವಿಯ (Belagavi) ಗೋಕಾಕ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಬಗ್ಗೆ ಮಾತನಾಡಿದರು. ಪ್ರಜ್ವಲ್ ರೇವಣ್ಣ ಕೇಸ್ ಎಲ್ಲರೂ ತಲೆ ತಗ್ಗಿಸುವ ವಿಷಯ. ರೇವಣ್ಣ ಅವರು ಬೇಕಿದ್ದರೆ ಕಾನೂನು ರೀತಿ ಹೋರಾಟ ಮಾಡಲಿ ಎಂದು ನುಡಿದರು.
ಹೊಸ ಬಾಂಬ್ ಸಿಡಿಸಿದ ಜಾರಕಿಹೊಳಿ:
ಮುಂದುವರಿದು ಮಾತನಾಡಿ, ಸಿದ್ದರಾಮಯ್ಯ (Siddaramaiah) ಮತ್ತು ಪರಮೇಶ್ವರ್ ಅವರದ್ದೂ ಮುಂದೆ ಸಿಡಿ ಬರಬಹುದು. ಸಿಡಿ ವಿಚಾರವನ್ನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೆ, ಆಗ ಎಲ್ಲರೂ ನನ್ನನ್ನು ಕಡೆಗಣಿಸಿದರು, ನಗುತ್ತಾ ನೋಡ್ತಿದ್ದರು. ಇವತ್ತು ಒಬ್ಬರಿಗೆ ಆಗಿದೆ, ಮುಂದೆ ಸಿದ್ದರಾಮಯ್ಯಗೂ ಬರಬಹುದು, ಪರಮೇಶ್ವರ್ ಅವರಿಗೂ ಬರಬಹುದು ಎಂದು ಹೊಸ ಬಾಂಬ್ ಸಿಡಿಸಿದರು. ಜೊತೆಗೆ ದಯವಿಟ್ಟು ಗೃಹ ಸಚಿವರು, ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಇದಕ್ಕೆ ಇತಿಶ್ರೀ ಹಾಡಬೇಕು. ಸಿಎಂ ಅವರ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.
ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಡಿಕೆ ಶಿವಕುಮಾರ್ ಆಡಿಯೋ ರಿಲೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಇದರಲ್ಲಿ ಡಿಕೆಶಿ ನೇರವಾಗಿ ಭಾಗಿಯಾಗಿರುವ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ. ನನ್ನ ಕೇಸ್‌ನಲ್ಲೂ ಡಿಕೆಶಿ ಮಾತನಾಡಿರುವ ಸಾಕ್ಷಿ ಇದೆ, ಅದನ್ನೇ ಕೊಡುತ್ತೇನೆ. ನನ್ನ ಬಗ್ಗೆ ಷಡ್ಯಂತ್ರ ಮಾಡಿದ್ದಕ್ಕೆ ಸಾಕ್ಷಿಗಳೂ ಇವೆ ಎಂದು ಹೇಳಿದರು.
ನನ್ನ ಕೇಸ್‌ನಲ್ಲಿ ನಮ್ಮವರೂ ಇದ್ದಾರೆ:
ಮಹಾನ್ ನಾಯಕ ಹಣದಲ್ಲಿ ಬಹಳಷ್ಟು ಪ್ರಭಾವಿ ಇದ್ದಾರೆ. ಹಣ ಕೊಟ್ಟು ಎಲ್ಲವನ್ನೂ ಖರೀದಿ ಮಾಡಬೇಕು ಅನ್ನೋ ಸೊಕ್ಕು ಇದೆ. ದೇಶದಲ್ಲಿ ಕಾನೂನು ಉಳಿಯಬೇಕು ಅಂದ್ರೆ, ಇದು ನಿಲ್ಲಬೇಕು. ನನ್ನ ಕೇಸ್‌ನಲ್ಲಿ ಡಿಕೆಶಿ ಮಾತ್ರ ಭಾಗಿಯಾಗಿಲ್ಲ. ನಮ್ಮವರೂ ಇದ್ದಾರೆ. ಜೂನ್ 4ರ ನಂತರ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ಎಚ್ಚರಿಸಿದರು.
ಸಿಬಿಐಗೆ ಕೇಸ್ ಕೊಟ್ಟರೆ ಸಾಕ್ಷಿ ಕೊಡ್ತೀನಿ:
ನನ್ನ ಕೇಸ್‌ನಲ್ಲಿ ಎಸ್‌ಐಟಿ ತನಿಖೆ ಬಗ್ಗೆ ವಿಶ್ವಾಸ ಇಲ್ಲ. ಈ ಕೇಸ್ ಅನ್ನು ಸಿಬಿಐಗೆ ಕೊಟ್ಟರೆ ಸಾಕ್ಷಿ ಕೊಡುತ್ತೇನೆ ಎಂದರಲ್ಲದೇ, ಸಿಬಿಐಗೆ ಕೇಸ್ ಕೊಟ್ಟರೂ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿ ಮಾಡಬೇಕು ಎಂದು ಆಗ್ರಹಿಸಿದರು.