ಬೆಂಗಳೂರು: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ದಿನನಿತ್ಯ ಸಾವಿರಾರು ಜನ ಆಗಮಿಸುತ್ತಾರೆ. ಜೊತೆಗೆ ನೂರಾರು ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ. ಆದರೆ ಕೆಎಸ್‍ಆರ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕವನ್ನು ದಿಢೀರ್ ಹೆಚ್ಚಿಸಿ ಶಾಕ್ ನೀಡಲಾಗಿದೆ.
ಸಿಟಿ ರೈಲ್ವೆ ಸ್ಟೇಷನ್‍ನಲ್ಲಿ ಮೀಟರ್ ರೀತಿಯಲ್ಲೇ ವಾಹನ ಪಾರ್ಕಿಂಗ್ ಶುಲ್ಕ ಏರಿಕೆಯಾಗುತ್ತಿದೆ. ಯಾವುದೇ ಖಾಸಗಿ ಮಾಲ್‍ಗೂ ಕಡಿಮೆ ಇಲ್ಲದಂತೆ ಶುಲ್ಕ ವಸೂಲಿಗಿಳಿದಿದ್ದು, ಗಂಟೆ ಲೆಕ್ಕದಲ್ಲಿ ಭಾರೀ ಶುಲ್ಕವನ್ನು ಪ್ರಯಾಣಿಕರು ಪಾವತಿಸಬೇಕಾಗಿದೆ.
Advertisement
Advertisement
ಮೊದಲ ಎರಡು ಗಂಟೆ ಕಾರ್ ಪಾರ್ಕಿಂಗ್‍ಗೆ 25 ರೂ., 2 ಗಂಟೆ ಅವಧಿ ಮುಗಿದರೆ 25 ರೂ, ಪಾವತಿಸಬೇಕು. ಒಂದು ವೇಳೆ ಮೂರು ಗಂಟೆ ಮೀರಿದರೆ ಪ್ರತಿ ಗಂಟೆಗೆ 20 ರೂ. ಶುಲ್ಕ ಕಟ್ಟಬೇಕು. 16 ಗಂಟೆ ಮೇಲ್ಪಟ್ಟ 24 ಗಂಟೆ ಒಳಗೆ 400 ರೂ. ಪಾವತಿಸಬೇಕು. ಹಳದಿ ಬೋರ್ಡ್ ಕಾರಿಗೆ ಮೊದಲ 1 ಗಂಟೆ ಅವಧಿಗೆ 25 ರೂ. 1 ಗಂಟೆ ನಂತರ ಪ್ರತಿ ಗಂಟೆಗೆ 20 ರೂ ಕಟ್ಟಬೇಕು.
Advertisement
ದ್ವಿಚಕ್ರ ವಾಹನಗಳ ಪಾರ್ಕಿಂಗ್ ಶುಲ್ಕ ಕೂಡ ಹೆಚ್ಚಾಗಿದ್ದು, ಮೊದಲ ಎರಡು ಗಂಟೆಗೆ 12 ರೂ. ಕಟ್ಟಬೇಕು. 2 ಗಂಟೆ ನಂತರ 16 ಗಂಟೆ ಒಳಗೆ ಪ್ರತಿ ಗಂಟೆಗೆ 10 ರೂ. ಫೀ ಪಾವತಿಸಬೇಕು. 16 ಗಂಟೆ ಮೇಲ್ಪಟ್ಟ 24 ಗಂಟೆ ಒಳಗೆ 80 ರೂ. ಶುಲ್ಕ ನೀಡಬೇಕು.
Advertisement
ಪ್ರಯಾಣಿಕರು ನಾಲ್ಕು ಚಕ್ರದ ವಾಹನಕ್ಕೆ 3,000 ರೂ. ಹಾಗೂ ದ್ವಿಚಕ್ರ ವಾಹನಕ್ಕೆ 1,000 ರೂ. ನೀಡಿ ತಿಂಗಳ ಪಾಸ್ ಸಹ ಪಡೆಯಬಹುದಾಗಿದೆ. 7 ನಿಮಿಷದ ಒಳಗೆ ಪಿಕ್ ಅಪ್ ಅಂಡ್ ಡ್ರಾಪ್‍ಗೆ ಖಾಸಗಿ ಮತ್ತು ಹಳದಿ ಬೋರ್ಡ್ ಕಾರು, ದ್ವಿಚಕ್ರ ಚಾಹನಕ್ಕೆ ಯಾವುದೇ ಶುಲ್ಕ ಇಲ್ಲ. 7 ನಿಮಿಷ ದಾಟಿದರೆ ನಾಲ್ಕು ಚಕ್ರದ ವಾಹನಗಳು ಕನಿಷ್ಠ 25 ರೂ. ಪಾವತಿಸಬೇಕು. ದ್ವಿಚಕ್ರ ವಾಹನಗಳು 7 ನಿಮಿಷ ದಾಟಿದರೆ 15 ರೂ. ಶುಲ್ಕ ಕಟ್ಟಬೇಕು.
ರೈಲ್ವೆ ನಿಲ್ದಾಣದಲ್ಲಿರುವ ಬ್ಯಾರಿಯರ್ ಆಕ್ಸೆಸ್ ಸಿಸ್ಟಂ ವಾಹನ ನಿಲ್ದಾಣಕ್ಕೆ ಬರುವ ಮತ್ತು ಹೊರಹೋಗುವ ವೇಳೆಯನ್ನು ದಾಖಲಿಸಿಕೊಳ್ಳುತ್ತದೆ. ಎಕ್ಸಿಟ್ ಗೇಟಿನಲ್ಲಿ ಶುಲ್ಕವನ್ನು ನೀಡಬೇಕಾಗುತ್ತದೆ. ಪ್ರತಿನಿತ್ಯ ಸುಮಾರು 2 ಸಾವಿರ ದ್ವಿಚಕ್ರ ವಾಹನಗಳು ಹಾಗೂ ಸುಮಾರು 600 ಕಾರುಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗುತ್ತವೆ.