ರಾಯಚೂರು: 73ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಭಾರತದಲ್ಲಿ ಮಾತ್ರವಲ್ಲದೆ ಬ್ರೆಜಿಲ್ ದೇಶದಲ್ಲೂ ಆಚರಿಸಲಾಗಿದೆ. ಬ್ರೆಜಿಲ್‍ನಲ್ಲಿ ನೆಲೆಸಿರುವ ರಾಯಚೂರಿನ ದಂಪತಿ ರಾಷ್ಟ್ರಗೀತೆಯನ್ನ ಹಾಡಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ದೇಶಪ್ರೇಮ ಮೆರೆದಿದ್ದಾರೆ.
ಜಿಲ್ಲೆಯ ಕಾಡ್ಲೂರು ಗ್ರಾಮದ ರಂಗಾರಾವ್ ದೇಸಾಯಿ ದಂಪತಿ ಬ್ರೆಜಿಲ್‍ನಲ್ಲಿ ನೆಲೆಸಿದ್ದು, ಅವರ ಮಗಳ ಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಗೀತೆಯನ್ನ ಹಾಡಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಸಂಭ್ರಮಿಸಿದ್ದಾರೆ. ದಂಪತಿ ಪುತ್ರಿ ಲಹರಿ ಓದುತ್ತಿರುವ ಬ್ರೆಜಿಲ್‍ನ ಕ್ಯುರಿಟಿಬಾದ ಕೊಲಿಗಿಯೋ ಪಾಸಿಟಿವೊ ಇಂಟರ್‌ನ್ಯಾಶನಲ್ ಸ್ಕೂಲ್‍ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲಾಗಿದೆ.
ಧ್ವಜಾರೋಹಣ ನೆರೆವೇರಿಸಲು ಸಹಕರಿಸಿದ ಶಾಲಾ ಆಡಳಿತ ಮಂಡಳಿಗೆ ರಂಗಾರಾವ್ ದಂಪತಿ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಇಂದು ರಕ್ಷಾಬಂಧನ ಹಬ್ಬ ಕೂಡ ಇರುವುದರಿಂದ ರಾಖಿ ಹಬ್ಬವನ್ನು ಕೂಡ ಶಾಲೆಯಲ್ಲಿ ಆಚರಿಸಿ ಖುಷಿಪಟ್ಟಿದ್ದಾರೆ. ದಂಪತಿಗೆ ಅಲ್ಲಿನ ಸ್ಥಳೀಯರು ಕೂಡ ಸಾಥ್ ನೀಡಿ ಅವರ ಸಂತೋಷದಲ್ಲಿ ಭಾಗಿಯಾಗಿದ್ದಾರೆ.