ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನುಗ್ಗೆಕಾಯಿ ಬೆಳೆದ ರೈತರು ಕೊರೊನಾ ಲಾಕ್‍ಡೌನ್ ಎಫೆಕ್ಟ್ ನಿಂದ ಈ ವರ್ಷ ಭಾರೀ ನಷ್ಟಕ್ಕೆ ಒಳಗಾಗಿದ್ದಾರೆ. ಎಲ್ಲ ರೈತರಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಅಲ್ಲದೆ ನುಗ್ಗೆಕಾಯಿ ಬೆಲೆ ಕೂಡ ಇಳಿಕೆಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ಒಬ್ಬೊಬ್ಬ ರೈತರು ಎರಡು ಮೂರು ಎಕರೆ ಪ್ರದೇಶದಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ನುಗ್ಗೆಕಾಯಿ ಬೆಳೆದಿದ್ದಾರೆ. ಈ ಬಾರಿ ನುಗ್ಗೆಕಾಯಿ ಬೆಳೆಕೂಡ ಉತ್ತಮವಾಗೇ ಬಂದಿದೆ. ಆದರೆ ಕೊಳ್ಳುವವರೇ ಇಲ್ಲವಾಗಿದೆ. ಹೀಗಾಗಿ ರೈತನ ಕೈ ಹಿಡಿಯಬೇಕಿದ್ದ ನುಗ್ಗೆಕಾಯಿ ಈಗ ರೈತನ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
Advertisement
Advertisement
ನುಗ್ಗೆಕಾಯಿ ಸರಿಯಾಗಿ ಮಾರಾಟವಾಗದೇ ಮನೆಯಲ್ಲೇ ಹಾಳಾಗುತ್ತಿವೆ. ಲಾಕ್‍ಡೌನ್‍ನಿಂದ ನುಗ್ಗೆಕಾಯಿ ಮಾರಾಟವಾಗದೇ ರೈತ ಸಾಲಗಾರನಾಗುತ್ತಿದ್ದಾನೆ. ಹೀಗಾಗಿ ಸರ್ಕಾರ ರೈತರಿಂದ ನೇರವಾಗಿ ಖರೀದಿಸಬೇಕು. ಇಲ್ಲವೇ ಮಾರುಕಟ್ಟೆ ಸೌಲಭ್ಯ ಹಾಗೂ ಉತ್ತಮ ಬೆಲೆಯನ್ನು ದೊರಕಿಸಿಕೊಡಬೇಕು ಎಂದು ನುಗ್ಗೆಕಾಯಿ ಬೆಳೆದಿರುವ ರೈತರು ಮನವಿ ಮಾಡಿದ್ದಾರೆ.